ಪ್ರಮುಖ ಸುದ್ದಿ

ಬೆಂಗಳೂರಲ್ಲಿ ನಾಪತ್ತೆಯಾದ ವಿದ್ಯಾರ್ಥಿಯ ಶವ‍ ಗುರುವಾಯನ ಕೆರೆಯಲ್ಲಿ ಪತ್ತೆ

ರಾಜ್ಯ(ಮಂಗಳೂರು)ಜು.26:- ಬೆಂಗಳೂರಲ್ಲಿ ನಾಪತ್ತೆಯಾದ ವಿದ್ಯಾರ್ಥಿಯ ಶವ‍ ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನ ಕೆರೆಯಲ್ಲಿ  ಪತ್ತೆಯಾಗಿದೆ. ಬೆಂಗಳೂರು ದೂರವಾಣಿ ನಗರದ ಐಟಿಐ ವಿದ್ಯಾಮಂದಿರದ  ವಿದ್ಯಾರ್ಥಿ ಯಶವಂತ್ ಸಾಯಿ ಎಂಬಾತನ ಶಾಲಾ ಬ್ಯಾಗ್‌ ನಿನ್ನೆ ಸಂಜೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಗ್ರಾಮದ ಕೆರೆ ಬಳಿ ಪತ್ತೆಯಾಗಿತ್ತು. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಶೋಧ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಹೂಡಿ ಮುನಿಸ್ವಾಮಿ ಶೆಟ್ಟಿ ಬಡಾವಣೆ ನಿವಾಸಿ ಎನ್‌.ವಿ.ಪ್ರೇಮಕುಮಾರ್ ಎಂಬವರ ಪುತ್ರ ಯಶವಂತ ಸಾಯಿ ಕೆ.ಪಿ ಮಂಗಳವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದ.

ಆತನ ಅಜ್ಜ ಶಾಲೆಗೆ ಕಳುಹಿಸಲು ಕರೆತಂದು ಬಸ್‌ ನಿಲ್ದಾಣದಲ್ಲಿ ಬಿಟ್ಟು ಮನೆಗೆ ಮರಳಿದ್ದರು. ಆ ಬಳಿಕ ವಿದ್ಯಾರ್ಥಿ ಕುಟುಂಬದವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಯಶವಂತ ಸಾಯಿ ನಾಪತ್ತೆಯಾಗಿರುವುದು ಗೊತ್ತಾಗುತ್ತಿದ್ದಂತೆ ಆತನ ಕುಟುಂಬದವರು ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಗುರುವಾಯನಕೆರೆ ಗ್ರಾಮದ ಕೆರೆಯ ದಡದಲ್ಲಿ ಶಾಲಾ ಬ್ಯಾಗ್‌ ಒಂದು ಅನಾಥ ಸ್ಥಿತಿಯಲ್ಲಿರುವುದನ್ನು ಕಂಡ ಸ್ಥಳೀಯರು ಈ ಬಗ್ಗೆ ಬೆಳ್ತಂಗಡಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬೆಂಗಳೂರಿನಿಂದ ಮಂಗಳೂರಿಗೆ ಮಾಡಿರುವ ರೂ.372 ಟಿಕೆಟ್ ಮತ್ತು ಬೆಳ್ತಂಗಡಿಯಿಂದ ಕಾರ್ಕಳಕ್ಕೆ ಮಾಡಿರುವ ರೂ.53 ಟಿಕೆಟ್ ಬ್ಯಾಗ್‍ನಲ್ಲಿ ಪತ್ತೆಯಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: