ಮೈಸೂರು

ದಲಿತರು ಸಹಕಾರ ಕ್ಷೇತ್ರದಲ್ಲಿ ಪ್ರತಿನಿಧಿಸಬೇಕು : ಎಚ್.ಸಿ. ಜೋಷಿ

ಹೆಚ್ಚೆಚ್ಚು ಅವಕಾಶ ಕಲ್ಪಿಸಿಕೊಟ್ಟಂತೆ ದಲಿತರು ಸಹಕಾರ ಕ್ಷೇತ್ರದಲ್ಲಿ  ಪ್ರತಿನಿಧಿಸಬೇಕು. ಆಗ ಮಾತ್ರ ಸಮಾನತೆ ದೊರೆಯುವುದಕ್ಕೆ ಸಹಕಾರಿಯಾಗುವುದು ಎಂದು ಮೈಸೂರು ಪ್ರಾಂತ್ಯದ ಸಹಕಾರ ಸಂಘಗಳ ಜಂಟಿ ನಿಬಂಧಕ ಹೆಚ್.ಸಿ.ಜೋಷಿ ತಿಳಿಸಿದರು.

ಮೈಸೂರು ಜೆ.ಎಲ್.ಬಿ ರಸ್ತೆಯಲ್ಲಿರುವ ಮಯೂರ ಹೊಯ್ಸಳ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ಸಹಕಾರ ಸಂಘಗಳ ಮೂಲಕ ದಲಿತರ ಸಬಲೀಕರಣ ಕುರಿತು ಮೈಸೂರು ವಿಭಾಗದ ಪರಿಶಿಷ್ಟ ಜಾತಿ/ಪಂಗಡದ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗಾಗಿ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹೆಚ್.ಸಿ.ಜೋಷಿ ಮಾತನಾಡಿ ಸಹಕಾರಿ ಕ್ಷೇತ್ರದತ್ತ ದಲಿತ ಸಮುದಾಯವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಚರ್ಚೆ ಹಾಗೂ ವಿಚಾರ ವಿನಿಮಯಗಳು ನಡೆಯಬೇಕು ಎಂದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ ದಲಿತರನ್ನು ಹೆಚ್ಚಾಗಿ ಸಹಕಾರಿ ಸಂಘಗಳಿಗೆ ಬರಮಾಡಿಕೊಳ್ಳುವ ಮೂಲಕ ಕ್ಷೇತ್ರಕ್ಕೆ ಧ್ವನಿಯಾಗಬೇಕು. ಉಳ್ಳವರಿಗೆ ಮಾತ್ರ ಅಧಿಕಾರ ಎಂಬಂತೆ ಸೀಮಿತವಾಗಿರುವ ದೃಷ್ಟಿಕೋನವನ್ನು ಬದಲಿಸಿ ದಲಿತರನ್ನು ದೊಡ್ಡಮಟ್ಟಕ್ಕೆ ತರಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭ ಕಾರ್ಯನಿರ್ವಹಣಾಧಿಕಾರಿಗಳ ಕರ್ತವ್ಯಗಳು, ಜವಾಬ್ದಾರಿಗಳು ಹಾಗೂ ಉತ್ತರದಾಯಿತ್ವ, ಸಹಕಾರ ಕಾಯಿದೆ ಮತ್ತು ನಿಯಮಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಹಕಾರ ಸಂಘಗಳಿಗಿರುವ ಮೀಸಲಾತಿ ಅವಕಾಶ ಹಾಗೂ ಸಹಕಾರ ಸಂಘಗಳಿಗೆ ಸರ್ಕಾರ ಮತ್ತು ಸಹಕಾರ ಇಲಾಖೆಯಿಂದ ದೊರಕುವ ಸೌಲಭ್ಯಗಳು, ಯೋಜನೆಗಳು ಮತ್ತು ಯಶಸ್ವಿನಿ ಯೋಜನೆ ಕುರಿತು ಉಪನ್ಯಾಸ ನೆರವೇರಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಎಸ್.ಚಂದ್ರಶೇಖರ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಉಪಾಧ್ಯಕ್ಷ ಹೆಚ್.ವಿ.ನಾಗರಾಜ್, ರಾಜ್ಯ ಲ್ಯಾಂಪ್ಸ್ ಮಹಾಮಂಡಳ ಅಧ್ಯಕ್ಷ ಕೃಷ್ಣಯ್ಯ, ನಿರ್ದೇಶಕ ಎ.ಕೆ.ಮನುಮುತ್ತಪ್ಪ, ವ್ಯವಸ್ಥಾಪಕ ನಿರ್ದೇಶಕ ಆರ್.ಶ್ರೀಧರ್, ಮತ್ತಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: