ಮೈಸೂರು

ಸಮುದಾಯ ಭವನಗಳು ಸಮುದಾಯದ ಮಕ್ಕಳ ಭವಿಷ್ಯರೂಪಿಸುವ ಅಧ್ಯಯನ ಕೇಂದ್ರಗಳಾದಾಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ : ಶಾಸಕ ಹೆಚ್ ವಿಶ್ವನಾಥ್

ಮೈಸೂರು,ಜು.26:- ಸಮುದಾಯ ಭವನಗಳು ವಾಲಗ ಊದುವ ಕಲ್ಯಾಣ ಮಂಟಪಗಳಿಗೆ ಸೀಮಿತವಾಗದೆ ಸಮುದಾಯದ ಮಕ್ಕಳ ಭವಿಷ್ಯರೂಪಿಸುವ ಅಧ್ಯಯನ ಕೇಂದ್ರಗಳಾದಾಗ ಮಾತ್ರ ತಳಮಟ್ಟದ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಶಾಸಕ ಅಡಗೂರು ವಿಶ್ವನಾಥ್ ಅಭಿಪ್ರಾಯಪಟ್ಟರು.

ನಿನ್ನೆ ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಹಾಗೂ ಡಿ.ಕುಮಾರ್ ಮನವಿ ಮೇರೆಗೆ ಹುಣಸೂರಿನ ಅಂಬೇಡ್ಕರ್ ಭವನದ ಮೂಲಭೂತ ಸೌಲಭ್ಯ ವೀಕ್ಷಿಸಲು ಹಿರಿಯ ಅಧಿಕಾರಿಗಳೊಂದಿಗೆ ಆಗಮಿಸಿದ ಶಾಸಕರು ಅಲ್ಲಿನ ವಸ್ತುಸ್ಥಿತಿ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸಿ ಅವಶ್ಯವಿರುವ ಮೂಲಭೂತ ಸೌಕರ್ಯಗಳಾದ ವ್ಯವಸ್ಥಿತ ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ಕ್ಯಾಂಟಿನ್ ವ್ಯವಸ್ಥೆ ಮಾಡುವುದರ ಜೊತೆಗೆ ಚೇರ್ ಹಾಗೂ ಮೈಕ್ ವ್ಯವಸ್ಥೆ ಮಾಡಿ ಪ್ರತ್ಯೇಕವಾಗಿ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಭವನದ ಪಕ್ಕದಲ್ಲಿದ್ದ ಖಾಲಿ ಸ್ಥಳವನ್ನು ಪೌರಕಾರ್ಮಿಕರ ವಿಶ್ರಾಂತಿ ಗೃಹ ಮಾಡಿರುವುದನ್ನು ನಿಂಗರಾಜ ಮಲ್ಲಾಡಿರವರು ವಿರೋಧಿಸಿ ಅಡುಗೆ ಮನೆ ನಿರ್ಮಾಣ ಮಾಡಲು ವಿನಂತಿಸಿದಾಗ ಅವರನ್ನು ಮನವೊಲಿಸಿದ ಶಾಸಕರು ವಿಶ್ರಾಂತಿ ಗೃಹಕ್ಕೆ ಈಗಾಗಲೇ ಮಂಜೂರಾಗಿರುವುದರಿಂದ ಅದನ್ನು ಬದಲಾಯಿಸುವುದು ಬೇಡ ಎಂದು ಉಳಿದ ಬೇಡಿಕೆಗಳನ್ನು ಕೂಡಲೇ ನೆರವೇರಿಸುವುದರ ಜೊತೆ ಹಳೆ ಪುರಸಭೆ ಕಟ್ಟಡ ತೆರವುಗೊಳಿಸಿ ನಗರಸಭೆ ಕಟ್ಟಡ ಹಾಗೂ ಅಂಬೇಡ್ಕರ್ ಭವನಗಳ ಅಂದ ಹೆಚ್ಚುವಂತೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ರೋಟರಿ ವಿದ್ಯಾಸಂಸ್ಥೆಗೆ ಈಗಾಗಲೇ ಲಕ್ಷಾಂತರ ಬೆಲೆ ಬಾಳುವ ಪುರಸಭೆಯ ಜಾಗ ನೀಡಿದ್ದು ಅವರು ಅದನ್ನು ಯಾವ ಸಾಮಾಜಿಕ ಕಾರ್ಯಕ್ಕೂ ಸದ್ಬಳಕೆ ಮಾಡದೆ ಕೇವಲ ಲಾಭಕ್ಕಾಗಿ ವಿದ್ಯಾ ಸಂಸ್ಥೆ ನಿರ್ಮಿಸಿಕೊಂಡಿದ್ದು, ರೋಟರಿ ಸಂಸ್ಥೆಯ ಆಡಳಿತ ಮಂಡಲಿ ಪುನಃ ಪುರಸಭೆಯ ಲಕ್ಷಾಂತರ ಮೌಲ್ಯದ ಜಾಗವನ್ನು ಪುಕ್ಕಟೆ ಪಡೆಯಲು ಹುನ್ನಾರ ನಡೆಸಿದ್ದರು. ಆದರೂ ಕೂಡ ಸಂಸ್ಥೆ ಪುಕ್ಕಟೆ ಜಾಗ ಪಡೆಯಲು ವಾಮ ಮಾರ್ಗ ಅನುಸರಿಸುತ್ತಿರುವ ಅನುಮಾನವಿದ್ದು, ಸರ್ಕಾರಿ ಕಟ್ಟಡಗಳಿಗೆ ಜಾಗದ ಅವಶ್ಯವಿರುವ ಕಾರಣ ರೋಟರಿ ಸಂಸ್ಥೆಗೆ ಎರಡನೇ ಬಾರಿಗೆ ಯಾವ ಕಾರಣಕ್ಕೂ ಸರ್ಕಾರಿ ಜಾಗ ನೀಡಬಾರದು, ಇದಕ್ಕೆ ಸಾರ್ವಜನಿಕರ ವಿರೋಧವಿದೆ ಎಂದು ಜೆ.ಡಿ.ಎಸ್ ಮುಖಂಡ ಇಂಟಕ್ ರಾಜು ಶಾಸಕರಲ್ಲಿ ಆಗ್ರಹಿಸಿದರು.

ಶಾಸಕರೊಂದಿಗೆ ಉಪವಿಭಾಗಾಧಿಕಾರಿ ನಿತೀಶ್, ಪೌರಯುಕ್ತ ಶಿವಪ್ಪನಾಯ್ಕ, ನಗರಸಭೆ ಅಧ್ಯಕ್ಷ ಶಿವಕುಮಾರ್, ಸಮಾಜ ಕಲ್ಯಾಣಾಧಿಕಾರಿ ಮೋಹನ್‍ಕುಮಾರ್, ಆರ್.ಐ ಸೋಮಶೇಖರ್, ನಗರಸಭಾ ಸದಸ್ಯರಾದ ಮಹದೇವ್, ಲಕ್ಷ್ಮಣ್, ದಲಿತ ಮುಖಂಡ ಹರಿಹರ ಆನಂದ ಸ್ವಾಮಿ ಸೇರಿದಂತೆ ಆನೇಕರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: