ಮೈಸೂರು

ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ‘ಪತಂಗ’ದ ಚೆಲುವಿನ ಚಿತ್ತಾರ

ಮೈಸೂರು, ಜು.26:- ನಗರದ ಬೋಗಾದಿ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಮಕ್ಕಳು ಬಾನಂಗಳದಲ್ಲಿ ಗಾಳಿಪಟಗಳನ್ನು ಹಾರಿಸಿ ನಕ್ಕು ನಲಿದರು. ಪ್ರತಿ ವರ್ಷದಂತೆ ಗಾಳಿಪಟ ಹಾರಿಸುವ ಸ್ಪರ್ಧೆ, ಉತ್ಸವವು ಇತ್ತೀಚೆಗೆ ವಿಜೃಂಭಣೆಯಿಂದ ನಡೆಯಿತು.

‘ಗಾಳಿಪಟ ಉತ್ಸವ’ದ ನಾನಾ ಸ್ಪರ್ಧೆ, ಮನರಂಜನಾ ಚಟುವಟಿಕೆಗಳಲ್ಲಿ ಮಕ್ಕಳು ಮಿಂದೆದ್ದರು. ಗಾಳಿಪಟಗಳ ಹಾರಾಟಕ್ಕಿಂತ ಮಕ್ಕಳ ಉತ್ಸಾಹವೇ ಮೈದಾನವನ್ನು ಆವರಿಸಿಕೊಂಡಿತ್ತು. ರಸಪ್ರಶ್ನೆ, ಪ್ರತಿಭಾನ್ವೇಷಣೆ ಸ್ಪರ್ಧೆ, ಸಂಗೀತ, ಸೋಲೋ ಹಾಡು ಮತ್ತು ನೃತ್ಯ ಸ್ಪರ್ಧೆ ನಡೆಯಿತು. ಇದಾದ ನಂತರ ಸಿಡಿಮದ್ದುಗಳ ಪ್ರದರ್ಶನ ಗಮನ ಸೆಳೆಯಿತು. ಇದರಲ್ಲಿ ನೂರಾರು ಮಕ್ಕಳು ಪಾಲ್ಗೊಂಡಿದ್ದರು.

ಆಷಾಢ ಮಾಸಾರಂಭದ ಗಾಳಿಯಲ್ಲಿ ಅಬಾಲ ವೃದ್ಧರಾದಿಯಾಗಿ ಬಣ್ಣಬಣ್ಣದ ವಿವಿಧ ನಮೂನೆಯ ಗಾಳಿಪಟ ಹಾರಿಸಿ ಆನಂದಪಟ್ಟರು. ಸ್ಪರ್ಧೆಯಲ್ಲಿ ವಿಜೇತರಾಗಿ ಬಹುಮಾನಗಳನ್ನು ಪಡೆದರು. ಶುಭ್ರವಾದ ನೀಲಾಗಸದಿ ಹೊಳೆಯುತ್ತಿದ್ದ ಸೂರ್ಯನನ್ನೇ ನುಂಗುವಂತೆ ನೂರಾರು ಗಾಳಿಪಟಗಳು ಮುಗಿಲಿನೆತ್ತರಕ್ಕೆ, ತಾ ಮುಂದು ನಾ ಮುಂದು ಎಂದು ಮುಗಿಬಿದ್ದು ಹಾರುತ್ತಿದ್ದವು. ಸೂತ್ರ ಸರಿಯಿಲ್ಲದ ಗಾಳಿಪಟಗಳು ಲಾಗ ಹಾಕುತ್ತಿದ್ದರೆ, ಪುಟ್ಟ ಮಕ್ಕಳು ತಾವೇನೂ ಕಡಿಮೆ ಇಲ್ಲ ಎನ್ನುವಂತೆ ಕೈಯಲ್ಲೊಂದು ಮೋಟು ದಾರಕಟ್ಟಿದ ಪುಟ್ಟ ಗಾಳಿಪಟ ಹಿಡಿದು ಮೈದಾನದಲ್ಲೆಲ್ಲಾ ಓಡಾಡುತ್ತಿದ್ದರು.

ಆಗಸದಲ್ಲಿ ಹಾರಿಬಿಟ್ಟ 1500 ಪಟಗಳ ಅತಿ ಉದ್ದದ ಗಾಳಿಪಟ ಒಂದು ಗಾಳಿಪಟದ ಹಿಂದೆ ಮತ್ತೊಂದು ಗಾಳಿಪಟ ಕಟ್ಟಿ ಹನುಮಂತನ ಬಾಲದಂತೆ ಬೆಳೆಸಲಾಗಿದ್ದ ಅತಿ ಉದ್ದದ ಗಾಳಿಪಟ ಬಾನಂಗಳದಿ ಹಾರಾಡಿದಾಗ ಅಲ್ಲಿ ನೆರೆದಿದ್ದ ಶಾಲಾ ಮಕ್ಕಳು, ಅಧ್ಯಕ್ಷ ಟಿ.ರಂಗಪ್ಪ, ಆಡಳಿತಾಧಿಕಾರಿ ಕಾಂತಿನಾಯಕ್ ಹಾಗೂ ಇತರ ಶಿಕ್ಷಕರು ಕರತಾಡನ ಮಾಡಿದರು. ಕೈ ಚಪ್ಪಾಳೆ ತಟ್ಟುವ ಹುಮ್ಮಸ್ಸಿನಲ್ಲಿ ಕೆಲವರು ತಾವು ಹಿಡಿದಿದ್ದ ಗಾಳಿಪಟದ ದಾರವನ್ನೂ ಕೈಬಿಟ್ಟ ಪ್ರಸಂಗವೂ ನಡೆಯಿತು. ಗಾಳಿಪಟ ಉತ್ಸವದಲ್ಲಿ ಮಕ್ಕಳು ಸಂಭ್ರಮಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: