
ಮೈಸೂರು
ಯುವ ಪೀಳಿಗೆ ದೇಶವನ್ನು ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ಮುನ್ನಡೆಸಲಿದೆ: ಯದುವೀರ್ ವಿಶ್ವಾಸ
ಇಂದಿನ ಯುವ ಪೀಳಿಗೆ ಭಾರತ ದೇಶವನ್ನು ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಮುನ್ನಡೆಸಲಿದೆ ಎಂಬ ವಿಶ್ವಾಸವನ್ನು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವ್ಯಕ್ತಪಡಿಸಿದರು.
ಮೈಸೂರಿನ ಎನ್ಐಇ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಡಿಎವಿ ಪಬ್ಲಿಕ್ ಶಾಲೆಯ ವತಿಯಿಂದ ಏರ್ಪಡಿಸಲಾದ ‘ಶಿಶಿರೋತ್ಸವ-2016’ 14ನೇ ವಾರ್ಷಿಕೋತ್ಸವ ಸಮಾರಂಭವನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ನಮ್ಮ ಸಂಸ್ಕೃತಿಯನ್ನು ಇಡೀ ಪ್ರಪಂಚವೇ ಕೊಂಡಾಡುತ್ತಿದೆ ಎಂದು ತಿಳಿಸಿದರು. ಸಂಸ್ಕೃತಿಯನ್ನು ಜನರ ಬಳಿ ತಲುಪಿಸುವಲ್ಲಿ ಮೈಸೂರು ಒಡೆಯರ್ ಕೊಡುಗೆ ಅಪಾರ ಎಂದರು.
ಸ್ವಾಮಿ ವಿವೇಕಾನಂದ ಯುವ ಬ್ರಿಗೆಡ್ನ ಸಂಸ್ಥಾಪಕ ಡಾ.ಆರ್. ಬಾಲಸುಬ್ರಹ್ಮಣ್ಯಂ ಮಾತನಾಡಿ, ಇಂದಿನ ಶಿಕ್ಷಣ ನೈತಿಕ ಮೌಲ್ಯಗಳನ್ನು ತಿಳಿಸುತ್ತಿಲ್ಲ. ಮಕ್ಕಳ ಮೇಲಿನ ಒತ್ತಡ ಹೆಚ್ಚುತ್ತಿದೆ. ಅವರ ಭವಿಷ್ಯವನ್ನು ರೂಪಿಸುವಂತಹ ಶಿಕ್ಷಣಗಳು ಮಾಯವಾಗುತ್ತಿವೆ ಎಂದು ಖೇದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಝೀ-ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸ.ರಿ.ಗ.ಮ.ಪ. ಲಿಟಲ್ಚ್ಯಾಂಪ್ಸ್
ನ ಸ್ಪರ್ಧಿ ಮಾಸ್ಟರ್ ಶ್ರೀಕರ್ನನ್ನು ಯದುವೀರ್ ಸನ್ಮಾನಿಸಿದರು. ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಡಿಎವಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಎನ್.ಸಚ್ಚಿದಾನಂದ, ಮುಖ್ಯ ಕಾರ್ಯದರ್ಶಿ ಜಯಶ್ರೀ, ಪ್ರಾಂಶುಪಾಲ ಕೆ.ಆರ್.ಶೋಭಾ ಮತ್ತಿತರರು ಉಪಸ್ಥಿತರಿದ್ದರು.