ಮೈಸೂರು

ಪತ್ನಿ ಕೊಲೆ ಪ್ರಕರಣ : ಪತಿಗೆ ಜೀವಾವಧಿ ಶಿಕ್ಷೆ

ಮದ್ಯ ಸೇವನೆಗೆ ಹಣ ನೀಡಿಲ್ಲವೆಂಬ ಕಾರಣಕ್ಕೆ ಪತ್ನಿಯನ್ನೇ ಕೊಲೆಗೈದ ಪತಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ  ದಂಡ ವಿಧಿಸಿ ಆದೇಶ ನೀಡಿದೆ.

ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಅಮಿತ್ ಬಾಬು (38) ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತನ ಕೈಯ್ಯಿಂದ ಕೊಲೆಯಾದ ಮಹಿಳೆ  ಮೈಸೂರಿನ ಪ್ರಿಯಾ. 2013 ರ ಅಗಸ್ಟ್ 8 ರಂದು ದೇವರಾಜ ಠಾಣಾ ವ್ಯಾಪ್ತಿ ಎದುರು ಸಾರ್ವಜನಿಕರ ಎದುರೇ 19 ಬಾರಿ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.  ವೃತ್ತಿಯಲ್ಲಿ ಕಾರುಚಾಲಕನಾಗಿದ್ದ ಅಮಿತ್ ಹಾಗೂ ಪ್ರಿಯಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ವಿವಾಹಾನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು. ಮದ್ಯ ವ್ಯಸನಿಯಾದ ಅಮಿತ್ ಕೆಲಸವನ್ನು ಕಳೆದುಕೊಂಡು ನಿರುದ್ಯೋಗಿಯಾಗಿದ್ದ. ದಂಪತಿಗಳ ನಡುವೆ ವೈಮನಸ್ಸಿದ್ದ ಪರಿಣಾಮ ಪತ್ನಿ ಪ್ರಿಯಾ ಮಕ್ಕಳೊಂದಿಗೆ ತವರು ಮನೆ ಸೇರಿದ್ದರಲ್ಲದೇ ಮೈಸೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು. ಆಗಾಗ ಬಂದು ದಾಂಧಲೆ ಎಬ್ಬಿಸುತ್ತಿದ್ದ ಅಮಿತ್ ಅಗಸ್ಟ್ 7 ರ ರಾತ್ರಿ ಮದ್ಯ ಸೇವಿಸಲು ಹಣ ನೀಡುವಂತೆ ಪತ್ನಿಯನ್ನು ಪೀಡಿಸಿದ್ದ. ಹಣ ನೀಡಲು ನಿರಾಕರಿಸಿದ ಪತ್ನಿಯನ್ನು ಹತ್ಯೆಗೈಯ್ಯಲು ಸಂಚು ರೂಪಿಸಿದ್ದ. ಮನೆಗೆ ತೆರಳಿ ಮಾರನೆಯ ದಿನ ಕುಡುಗೋಲಿನೊಂದಿಗೆ ಬಂದ ಅಮಿತ್ ದೇವರಾಜ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರೆದುರೇ ಬರ್ಬರವಾಗಿ ಹತ್ಯೆಗೈದಿದ್ದ.

ತಾಯಿಯ ಮರಣ ಹಾಗೂ ತಂದೆಯ ಜೈಲುವಾಸದಿಂದ ಇಬ್ಬರು ಮಕ್ಕಳು ಅನಾಥರಾಗಿದ್ದು, ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ನ್ಯಾಯಾಧೀಶ ಎನ್. ಕೃಷ್ಣಯ್ಯ ಆದೇಶದಲ್ಲಿ ಸೂಚಿಸಿದ್ದು, ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಅಜಿತ್ ಕುಮಾರ್ ಡಿ.ಹಮಿಗಿ ವಾದ ಮಂಡಿಸಿದ್ದರು.

Leave a Reply

comments

Related Articles

error: