Uncategorized

ರೈತರು ಹೂಡುವ ಬಂಡವಾಳ ಕಡಿಮ ಮಾಡಿ ಲಾಭ ಹೆಚ್ಚು ಬರುವಂತೆ ಮಾಡಬೇಕಿದೆ: ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ

"ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಮತ್ತು ಸಧೃಡ ಮಾರುಕಟ್ಟೆ- ಕೇಂದ್ರದ ನೂತನ ಯೋಜನೆಗಳ ಸಮಗ್ರ ವಿಶ್ಲೇಷಣೆ" ಕಾರ್ಯಕ್ರಮದಲ್ಲಿ ಅಭಿಪ್ರಾಯ

ಬೆಂಗಳೂರು (ಜುಲೈ 26): ಕೃಷಿ ಲಾಭದಾಯಕವಾಗಬೇಕಾದರೆ ರೈತರು ಬೆಳೆಗಳಿಗೆ ಹಾಕುವ ಬಂಡವಾಳವನ್ನು ಕಡಿಮೆ ಮಾಡುವತ್ತ ಕೃಷಿ ತಜ್ಞರು ಹಾಗೂ ವಿಜ್ಞಾನಿಗಳು ಚಿಂತಿಸಬೇಕಾದ ಅಗತ್ಯವಿದೆ ಎಂದು ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಕೃಷಿ ಬೆಲೆ ಆಯೋಗ, ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಕೃವಿವಿ ಅಲ್ಯೂಮಿನಿ ಅಸೋಸಿಯೇಷನ್‍ಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ “ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಮತ್ತು ಸಧೃಡ ಮಾರುಕಟ್ಟೆ- ಕೇಂದ್ರದ ನೂತನ ಯೋಜನೆಗಳ ಸಮಗ್ರ ವಿಶ್ಲೇಷಣೆ” ರಾಷ್ಟ್ರಮಟ್ಟದ ತಾಂತ್ರಿಕ ಕಾರ್ಯಾಗಾರದ ಉದ್ಘಾಟನೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಚಿವರು ಮಾತನಾಡಿ ಸಾಲಮನ್ನದಂತಹ ಯೋಜನೆಗಳು ರೈತರಿಗೆ ಅಲ್ಪಮಟ್ಟದ ಹೊರೆಯನ್ನು ಇಳಿಸಿದೆ. ರೈತರು ತಮ್ಮ ಸಮಸ್ಯೆಗಳಿಂದ ಸಂಪೂರ್ಣವಾಗಿ ಪರಿಹಾರ ಪಡೆಯುವಂತ ಕ್ರಮಗಳ ಬಗ್ಗೆ ಕೃಷಿ ತಜ್ಞರು ಹಾಗೂ ವಿಜ್ಞಾನಿಗಳು ಕಾರ್ಯೋನ್ಮುಖರಾಗುವಂತೆ ಕರೆ ನೀಡಿದರು.

ಈ ಕಾರ್ಯಾಗಾರದಲ್ಲಿ ಚರ್ಚೆಯಾಗುವ ವಿಷಯಗಳ ಮೇಲೆ ನಿರ್ಧರಿಸುವ ಅಂಶಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆಯುವಲ್ಲಿ ರಾಜ್ಯ ಸರ್ಕಾರ ವಹಿಸಬೇಕಾದ ಅಗತ್ಯ ಕ್ರಮಗಳ ಬಗ್ಗೆ ಯೋಜಿಸಲಾಗುವುದು.

ಬೇರೆ ದೇಶಗಳ ರೈತರಿಗೆ ಹೋಲಿಸಿದಲ್ಲಿ ನಮ್ಮ ದೇಶದ ರೈತರು ಬೆಳೆಯುವ ಪ್ರತಿ ಹೆಕ್ಟೇರಿನ ಉತ್ಪಾದನೆ ಕಡಿಮೆ ಇದೆ. ಈಗಾಗಲೇ ಉತ್ಪಾದನೆ ಹೆಚ್ಚಿಸಿಕೊಳ್ಳುವತ್ತ ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊತ್ತಿರುವ ಕೇಂದ್ರ ಸರ್ಕಾರ ಮಾರುಕಟ್ಟೆ ಹಾಗೂ ಸಾಗಿಸುವ ವಿಧಾನಗಳ ಬಗ್ಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದರು.

ಕಾರ್ಯಾಗಾರದ ಪೂರಕ ವರದಿಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ ಅವರು ಕಾರ್ಯಾಗಾರ ಉದ್ದೇಶಿತ ವಿಷಯಗಳನ್ನು ಮಾತ್ರ ಚರ್ಚಿಸಿ ಸಂಪೂರ್ಣವಾಗಿ ಅದರ ಮೇಲೆ ಬೆಳಕು ಚೆಲ್ಲಬೇಕು. ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಸಬೇಕು.
ಕೃಷಿಕರು ವಿಜ್ಞಾನಿಗಳಿಗಿಂತ ಬುದ್ಧಿವಂತರಿದ್ದು ಪ್ರಾಯೋಗಿಕವಾಗಿ ತಮ್ಮ ಜೀವನವಿಡಿ ಕೃಷಿಯನ್ನೇ ಅವಲಂಭಿಸಿ ಬದುಕುತ್ತಿರುವ ಅವರಿಗೆ ಈ ವ್ಯವಹಾರಿಕ ಜಗತ್ತಿನಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆದುಕೊಳ್ಳುವ ವಿಧಾನಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ಸುಸ್ಥಿರ ಸಿರಿಧಾನ್ಯ ಕೃಷಿಯಿಂದ ಸ್ಥಿರ ಆಧಾಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಅವರು ಕೃಷಿ ಕುರಿತ ಸರ್ಕಾರಿ ಯೋಜನೆಗಳಲ್ಲಿ ಚಿಕ್ಕ ರೈತರು, ದೊಡ್ಡ ರೈತರು ಎಂದು ಬೇಧ ಭಾವ ಮಾಡುವ ಯೋಜನೆಗಳಿಗೆ ತಮ್ಮ ಸಹಮತವಿಲ್ಲ. ರೈತರೆಂದರೆ ಎಲ್ಲಾರು ಒಂದೇ ಎಂದರು.

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳೆರಡೂ ಜಂಟಿಯಾಗಿ ಕಾರ್ಯ ನಿರ್ವಹಿಸಿದ್ದಲ್ಲಿ ಮಾತ್ರ ರೈತ ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಸೃಷ್ಟಿಸಲು ಸಾಧ್ಯ. ಉತ್ತಮ ಬೆಲೆ ನಿರೀಕ್ಷಿಸಿದಲ್ಲಿ ಅದಕ್ಕೆ ಅಗತ್ಯವಿರುವ ಇತರೆ ಪೂರಕ ಅಂಶಗಳಾದ ಸಾಗಾಣಿಕೆ, ಉತ್ತಮ ಗೋದಾಮು, ಬೆಲೆಗಳ ಬಗ್ಗೆ ಆನ್‍ಲೈನ್ ವ್ಯವಸ್ಥೆ ಸೇರಿದಂತೆ ಅನೇಕ ವಿಷಯಗಳನ್ನು ಮೊದಲು ಸುಧಾರಿಸಿಕೊಳ್ಳುವ ಅಗತ್ಯವಿದೆ.

ರೈತ ಉತ್ತಮ ಜೀವನವನ್ನು ಕಟ್ಟಿಕೊಳ್ಳಲು ಸಾಲಮನ್ನಾದಂತಹ ಕಾರ್ಯಕ್ರಮಕ್ಕಿಂತ ಉತ್ತಮ ರೀತಿಯಲ್ಲಿ ದಿನದ 24 ಗಂಟೆಯೂ ವಿದ್ಯುತ್, ನೀರು ಹಾಗೂ ಬೆಳೆದ ವೈಜ್ಞಾನಿಕ ಬೆಲೆ ದೊರಕಿಸಿಕೊಟ್ಟಲ್ಲಿ ರೈತರಿಗೆ ಅದಕ್ಕಿಂತ ಉತ್ತಮ ಸಹಾಯ ಮತ್ತೊಂದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರೀಯ ಮಳೆ ಆಶ್ರಿತ ಕೃಷಿ ಪ್ರಾಧಿಕಾರ ಕಾರ್ಯ ನಿರ್ವಹಣಾಧಿಕಾರಿ ಡಾ: ಅಶೋಕ್ ದಳವಾಯಿ ಅವರು ಕಾರ್ಯಾಗಾರದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಕೇಂದ್ರ ಸರ್ಕಾರ 2022-23 ರೊಳಗೆ ರೈತರ ಆದಾಯನ್ನು ದ್ವಿಗುಣಗೊಳಿಸುವ ಗುರಿಯನ್ನು ಹಾಕಿಕೊಂಡಿದ್ದು ಅದಕ್ಕಾಗಿ ಅಗತ್ಯವಿರುವ ಕಾನೂನು, ಅಭಿವೃದ್ಧಿ ಸೇರಿದಂತೆ ಕೃಷಿ ಆಧರಿತ ಚಟುವಟಿಕಗಳ ವೈಜ್ಞಾನಿಕ ರೀತಿ ನೀತಿಗಳನ್ನು ಸೃಜಿಸುವಲ್ಲಿ ನಿರತವಾಗಿದೆ.

ಈ ನಿಟ್ಟಿನಲ್ಲಿ ಇತ್ತೀಚೆಗೆ ಕೃಷಿ ಆಯೋಗ ಹಾಗೂ ನೀತಿ ಆಯೋಗ ಜಂಟಿ ಸಭೆ ನಡೆಸಿ ಕೆಲವು ಅಂಶಗಳನ್ನು ಪಟ್ಟಿ ಮಾಡಲಾಗಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸಬೇಕಾದಲ್ಲಿ ಮೊದಲು ಭಾರತದ ಅತಿ ದೊಡ್ಡ ಕೃಷಿಯಾಗಿರುವ ದ್ವಿ ದಳ ಹಾಗೂ ಎಣ್ಣೆ ಕಾಳುಗಳ ಮಾರುಕಟ್ಟೆಯನ್ನು ದೇಶದ ಒಳಗೆ ಹಾಗೂ ಜಾಗತಿಕವಾಗಿ ವಿಸ್ತರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಸರ್ಕಾರ ನೀಡುವ ಬೆಂಬಲ ಬೆಲೆ ಮತ್ತು ಖಾಸಗಿಯವರು ನೀಡುವ ಬೆಲೆಗಳ ನಡುವಿನ ಅಸಮತೋಲನವನ್ನು ಸರಿಪಡಿಸಬೇಕು. ಸರ್ಕಾರ ಈ ಅಸಮತೋಲನದ ಬೆಲೆಯನ್ನು ರೈತರಿಗೆ ನೇರವಾಗಿ ಅವರ ಖಾತೆಗಳಿಗೆ ವರ್ಗಾಯಿಸುವ ವ್ಯವಸ್ಥೆಯ ಚಿಂಥನೆ ನಡೆದಿದೆ.

ಭವಿಷ್ಯದಲ್ಲಿ ಪ್ರತಿ 5 ರಿಂದ 6 ಕಿ.ಮಿ. ಗಳ ವ್ಯಾಪ್ತಿಯ ಒಳಗಡೆ ನಡೆಯುವ ಸಂತೆಗಳನ್ನು ಕೃಷಿ ಮಾರುಕಟ್ಟೆಗಳನ್ನಾಗಿ ಪರಿವರ್ತಿಸಿ ರೈತರು ತಾವು ಬೆಳೆದ ಬೆಳೆಗಳನ್ನು ಅಲ್ಲಿಯೇ ಮಾರುವ ವ್ಯವಸ್ಥೆಯ ಬಗ್ಗೆ ಕ್ರಮ ಕೈಗೊಳ್ಳುವತ್ತ ಚರ್ಚೆಗಳಾಗಬೇಕಿದೆ.

1965ರ ಹಸಿರು ಕ್ರಾಂತಿಯ ಮುಖ್ಯ ಗುರಿ ದೇಶಕ್ಕೆ ಸಾಕಾಗುವಷ್ಟು ಆಹಾರವನ್ನು ನಮಗೆ ನಾವೇ ಬೆಳೆಯಬೇಕು ಎನ್ನುವುದಾಗಿತ್ತು. ಇಂದು ಪರಿಸ್ಥಿತಿ ಬದಲಾಗಿದ್ದು ಅಗತ್ಯಕ್ಕಿಂತ ಹೆಚ್ಚಿನ ಆಹಾರವನ್ನು ಬೆಳೆಯಲಾಗುತ್ತಿದೆ. ಪ್ರಸ್ತುತ ಪೌಷ್ಠಿಕಾಂಶದ ಬೆಳೆಗಳನ್ನು ಬೆಳೆಯುವ ಬಗ್ಗೆ ಚಿಂತಿಸಲಾಗುತ್ತಿದೆ. ಜೊತೆಯಲ್ಲಿ ಬೆಳೆದ ಬೆಳೆಗೆ ಉತ್ತಮ ಬೆಲೆ ರೈತರಿಗೆ ದೊರಕಿ ಅವರ ಜೀವನ ಮಟ್ಟ ಸುಧಾರಿಸುವುದಕ್ಕಾಗಿ ಹಲವು ಅಂಶಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪಾಶಾ ಪಟೇಲ್, ನವದೆಹಲಿಯ ಸಂಜೀವ್‍ಕುಮಾರ್ ಚಡ್ಡಾ, ಹರಿಯಾಣದ ತೋಟಗಾರಿಕಾ ಮಹಾ ನಿರ್ದೇಶಕರಾದ ಡಾ: ಅರ್ಜುನ್‍ಸಿಂಗ್ ಸೈನಿ, ಮಧ್ಯಪ್ರದೇಶ ಕೃಷಿ ಮಂಡಿ ಬೋರ್ಡ್ ವ್ಯವಸ್ಥಾಪಕ ನಿರ್ದೇಶಕರಾದ ಫೈಯಾಜ್ ಅಹಮದ್ ಕಿದ್ವಾಯ್ ಸೇರಿದಂತೆ ಕೃಷಿ ಸಂಶೋಧಕರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಹಾಗೂ ರೈತರು ಭಾಗವಹಿಸಿದ್ದರು.

ಕೃಷಿ ಇಲಾಖೆಯ ಕಾರ್ಯದರ್ಶಿ ಮಹೇಶ್ವರರಾವ್ ಅವರು ಸ್ವಾಗತಿಸಿದರು. ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ: ಟಿ.ಎನ್. ಪ್ರಕಾಶ್ ಕಮ್ಮರಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. (ಎನ್.ಬಿ)

Leave a Reply

comments

Related Articles

error: