ಕರ್ನಾಟಕ

ವಿದ್ಯಾರ್ಥಿಗಳು ನಿರಂತರ ಅಭ್ಯಾಸದಿಂದ ಗುರಿ ಸಾಧಿಸಿ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಹಾಸನ (ಜುಲೈ 26): ವಿದ್ಯಾರ್ಥಿ ಜೀವನದಲ್ಲಿ ಹತ್ತನೇ ತರಗತಿಯಿಂದ ಅಂತಿಮ ಪದವಿ ಪೂರ್ಣಗೊಳಿಸುವ ಅಂತವು ಅತಿ ಮುಖ್ಯವಾದ ಕಾಲಘಟ್ಟವಾಗಿದೆ ಈ ಸಮಯವನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ನಿಗದಿತ ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿಯವರು ರೋಹಿಣಿ ಸಿಂಧೂರಿ ಅವರು ವಿದ್ಯಾರ್ಥಿಗಳಿಗೆ ಹೇಳಿದರು.

ಕಟ್ಟಾಯದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗುವಂತೆ ಜುಲೈ 25 ರಂದು ಏರ್ಪಡಿಸಿದ್ದ ತಾಯಂದಿರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ತಮ್ಮ ದೈನಂದಿನ ದಿನಚರಿಯಲ್ಲಿ ಸಮಯ ನಿಗದಿಪಡಿಸಿಕೊಂಡು ಪ್ರತಿನಿತ್ಯ ಒಂದೆರೆಡು ಗಂಟೆ ತಾವು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರದ ಬಗ್ಗೆ ಅಭ್ಯಸಿಸಲು ಮೀಸಲಿಡುವಂತೆ ತಿಳಿಸಿದ ಜಿಲ್ಲಾಧಿಕಾರಿಯವರು ನಿರಂತರ ಅಭ್ಯಾಸದಿಂದ ಗುರಿ ಮುಟ್ಟಲು ಸಹಕಾರಿಯಾಗಲಿದೆ ಎಂದರು.

ಸಿನಿಮಾ ಟಿವಿ ಮೊಬೈಲ್ ಇವುಗಳು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ ತಾಯಂದಿರು ಎಚ್ಚರವಹಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುವಂತೆ ತಾಯಂದಿರಿಗೆ ತಿಳಿಸಿದ ಜಿಲ್ಲಾಧಿಕಾರಿ ಅವರು ಮಕ್ಕಳು ಶಾಲಾ ಗ್ರಾಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳನ್ನು ಓದುವಂತೆ ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ತಾಯಂದಿರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ ರಸ್ತೆ, ಬಸ್ ಸೌಲಭ್ಯ ಅಸ್ಪತ್ರೆ, ವೈದ್ಯರು ಹಾಗೂ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಮಕ್ಕಳಿಗೆ ಸಹಾಯವಾಗುವಂತೆ ನಿಗದಿತ ಸ್ಥಳಗಳಲ್ಲಿ ಬಸ್ ನಿಲುಗಡೆಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು. ರಸ್ತೆಗೆ ಸಂಬಂದಪಟ್ಟ ಕಾಮಗಾರಿಯನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದ ಅವರು ಶಾಲಾ ಕಾಂಪೌಂಡ್ ಕೆಲಸವನ್ನು ನರೇಗಾ ಯೋಜನೆಯಡಿ ಕಟ್ಟಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗೆ ಸೂಚಿಸಿದರು.

ಕುಡಿಯುವ ನೀರನ್ನು ನಿಗದಿತ ಸಮಯಕ್ಕೆ ನೀಡುವುದರ ಜೊತೆಗೆ ಟ್ಯಾಂಕನ್ನು ಸ್ವಚ್ಛಗೊಳಿಸಲು ಕ್ರಮ ವಹಿಸುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಯವರು 15 ದಿನಗಳಿಗೊಮ್ಮೆ ವರದಿ ನೀಡುವಂತೆ ಆದೇಶಿಸಿದರು.

ಸಮಾಜ ಸೇವಕರು ಹಾಗೂ ಶಾಲೆಯ ಗೌರವಾಧ್ಯಕ್ಷರಾದ ಡಾ|| ಗುರುರಾಜ್ ಹೆಬ್ಬಾರ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರಿ ಶಾಲೆಗಳು ಉಳಿಯಬೇಕು ಚೆನ್ನಾಗಿ ನಡೆಯಬೇಕು ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.

ಕೆಲವು ಮೂಢನಂಬಿಕೆಗಳಿಗೆ ಬಲಿಯಾಗಿ ಮಹಿಳೆಯರು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಆರೋಗ್ಯವನ್ನು ಕಡೆಗಣಿಸಿ ಹಣ ಗಳಿಸಿದರೆ ಹಣದಿಂದ ಆರೋಗ್ಯ ಪಡೆಯಲು ಸಾಧ್ಯವಿಲ್ಲ ಹಾಗಾಗಿ ಪೌಷ್ಠಿಕ ಆಹಾರವನ್ನು ತಾಯಂದಿರು ಸೇವಿಸಬೇಕು ಜಿತೆಗೆ ಮಕ್ಕಳಿಗೂ ನೀಡಬೆಕು ಎಂದು ಹಾಸನ ನಗರದ ಮಲ್ನಾಡ್ ನರ್ಸಿಂಗ್ ಹೋಂ ಸ್ತ್ರೀ ಮತ್ತು ಪ್ರಸೂತಿ ತಜ್ಞರಾದ ಡಾ|| ಸಾವಿತ್ರಿ ಅವರು ತಿಳಿಸಿದರಲ್ಲದೆ,ಕೆಲವು ತಾಯಂದಿರಿಗೆ ಮೂಡ ನಂಬಿಕೆ ಇದೆ. ನಂಬಿಕೆ ಇರಲಿ ಆದರೆ ಮೂಢನಂಬಿಕೆ ತೊಲಗಲಿ ಎಂದರು.

ಡಾ||ಪೂರ್ಣಿಮಾ ಮತ್ತು ಡಾ||ಕಿರಣ್ ಅವರು ಹೆಣ್ಣು ಮಕ್ಕಳ ಆರೋಗ್ಯ ಮತ್ತು ಸಮಸ್ಯೆಗಳನ್ನು ಚರ್ಚಿಸುವುದರ ಜೊತೆಗೆ ಪರಿಹಾರ ತಿಳಿಸಿದರು. ಪ್ರೋಬೇಷನರಿ ಐ.ಎ.ಎಸ್. ಅಧಿಕಾರಿ ಎಂ.ಪ್ರಿಯಾಂಕ, ಶಾಲೆ ಮುಖ್ಯೋಪಾಧ್ಯಾಯರಾದ ಚವಾಹ್ಣ ಹಾಸನ ಹಾಗೂ ಮತ್ತಿತರರು ಉಪಸ್ಥಿತರಿದ್ದರು. (ಎನ್.ಬಿ)

Leave a Reply

comments

Related Articles

error: