
ಮೈಸೂರು
ಅಧಿಕಾರಿಗಳ ಬೇಜವಾಬ್ದಾರಿ: ಪಡಿತರ ಪೂರೈಕೆಗೆ ತೊಂದರೆ
ಬೈಲಕುಪ್ಪೆ: ಅಧಿಕಾರಿಗಳ ಬೇಜವಾಬ್ದಾರಿಯಿಂದ ಆಧಾರ್ ಕಾರ್ಡ್ ನೊಂದಾಯಿಸಲಾಗಿದ್ದರೂ ಆಹಾರ ಪದಾರ್ಥ ಪೂರೈಕೆ ಸ್ಥಗಿತಗೊಂಡಿರುವುದರಿಂದ ಅರೆಹೊಟ್ಟೆಯಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಕಾಣಬಹುದಾಗಿದೆ.
ತಾಲೂಕಿನಲ್ಲಿ ಸುಮಾರು 28 ಸಾವಿರ ಕಡುಬಡವರಿಗೆ ಈ ಪರಿಸ್ಥಿತಿ ನಿರ್ಮಾಣವಾಗಿದ್ದು ಪಡಿತರದಾರರಿಂದ ಆಧಾರ್ ಕಾರ್ಡ್ ನಂಬರ್ ಪಡೆಯಲಾಗಿದ್ದರೂ ನಿಗದಿತ ಸಮಯಕ್ಕೆ ಆಹಾರ ಇಲಾಖೆ ಅಧಿಕಾರಿಗಳು ನಮೂದಿಸದೆ ಇರುವುದರಿಂದ ಈ ಪರಿಸ್ಥಿತಿ ಎದುರಾಗಿದೆ.
ಈ ಬಗ್ಗೆ ಪಿರಿಯಾಪಟ್ಟಣ ತಾಲೂಕು ಆಹಾರ ಇಲಾಖೆಯ ಶಿರಸ್ದಾರ್ ಪಿ.ಸಿ. ಜಗದೀಶ್ ಅವರನ್ನು ಪ್ರಶ್ನಿಸಿದರೆ ರಾಜ್ಯದಲ್ಲಿ 58 ಲಕ್ಷ ಜನರಿಗೆ ಕಾರ್ಡ್ ರದ್ದಾಗಿ ಪಡಿತರ ಪದಾರ್ಥ ಸ್ಥಗಿತಗೊಂಡಿದೆ, ಪಿರಿಯಾಪಟ್ಟಣ ತಾಲೂಕಿನಲ್ಲಿ 28 ಸಾವಿರ ಜನರಿಗೆ ಈ ಪರಿಸ್ಥಿತಿ ಉಂಟಾಗಿದ್ದು ಮುಂದಿನ ತಿಂಗಳು ಸರಿಗೊಳ್ಳಲಿದೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ.
ಕಡುಬಡವರಿಗೆ ಕನಿಷ್ಠ 1 ಲೀ. ಸೀಮೆಎಣ್ಣೆ ಸಿಗದಂತಾಗಿದ್ದು ಇವರ ಮನೆಗಳಲ್ಲಿ ರಾತ್ರಿ ವೇಳೆ ಕಗ್ಗತ್ತಲೆಯಲ್ಲಿ ಕಾಲಕಳೆಯಬೇಕಾದ ಪರಿಸ್ಥಿತಿ ಬಂದೊದಗಿದೆ. ಯಾರ ತಪ್ಪಿನಿಂದ ಈ ಶಿಕ್ಷೆ ಅನುಭವಿಸಬೇಕು ಎಂದು ಗ್ರಾ.ಪಂ. ಸದಸ್ಯ ಚಂದ್ರಶೇಖರ್ ಪ್ರಶ್ನಿಸುತ್ತಿದ್ದಾರೆ.
ಆಹಾರ ಇಲಾಖೆಯ ಅಧಿಕಾರಿಗಳಿಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ನೀಡಿದ್ದು ಆಯಾಯ ಗ್ರಾ.ಪಂ.ಗಳಲ್ಲೂ ಸಹ ಸರಿಯಾದ ರೀತಿಯಲ್ಲಿ ಆಧಾರ್ ಕಾರ್ಡ್ಗಳನ್ನು ನೊಂದಾಯಿಸಲಾಗಿದೆ. ಆದರೂ ಆಹಾರ ಪದಾರ್ಥ ಮಾತ್ರ ಪೂರೈಕೆಯಾಗದೆ ಇರುವುದರಿಂದ ಪಡಿತರದಾರರನ್ನು ವಿತರಕರು ಬಾಯಿಗೆ ಬಂದಂತೆ ನಿಂದಿಸಿ ಕಳುಹಿಸುತ್ತಿರುವುದರಿಂದ ಜನರು ಆಹಾರ ಇಲಾಖೆ ಕಚೇರಿಗೆ ಅಲೆಯುತ್ತಿರುವುದನ್ನು ಕಾಣಬಹುದಾಗಿದೆ.
ಈ ತಿಂಗಳು ಆಹಾರ ಪದಾರ್ಥ ಸರಬರಾಜಾಗದೆ ಅಸಾಯಕತೆ ವ್ಯಕ್ತಪಡಿಸುತ್ತಿದ್ದು ಜಿಲ್ಲಾಧಿಕಾರಿಗಳು ಕೂಡಲೆ ಗಮನಹರಿಸಿ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಪಡಿತರ ಪದಾರ್ಥ ವಂಚಿತರಾದ ಲಕ್ಷ್ಮಮ್ಮ, ಶಾಂತಮ್ಮ, ರುಕ್ಮಿಣಿ, ಚಲುವಯ್ಯ, ಕೃಷ್ಣೇಗೌಡ, ಆಂಜನೇಯ ಸೇರಿದಂತೆ ಹಲವರು ಮನವಿ ಮಾಡಿಕೊಂಡಿದ್ದಾರೆ.
ವರದಿ: ಬಿ.ಆರ್. ರಾಜೇಶ್