ಕರ್ನಾಟಕ

ರಸ್ತೆ ದುರಸ್ತಿಯಾಗದಿದ್ದರೆ ಆ.15 ರಂದು “ಕರಾಳ ದಿನ” ಆಚರಣೆ : ಕಾಲೂರು ಗ್ರಾಮಸ್ಥರ ಎಚ್ಚರಿಕೆ

ರಾಜ್ಯ(ಮಡಿಕೇರಿ) ಜು.27 :- ಕಾಲೂರು ಗ್ರಾಮಸ್ಥರಿಗೆ ಜಿಲ್ಲಾ ಕೇಂದ್ರ ಮಡಿಕೇರಿಯನ್ನು ಸಂಪರ್ಕಿಸಲು ಇರುವ ರಸ್ತೆ, ದೇವಸ್ತೂರು ಸೇತುವೆ ಬಳಿ ಸಂಪೂರ್ಣ ಹದಗೆಟ್ಟಿದ್ದು, ಇದನ್ನು ಶೀಘ್ರ ದುರಸ್ತಿ ಪಡಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವದಂದು ಕಪ್ಪು ಪಟ್ಟಿ ಧರಿಸಿ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ‘ಕರಾಳ ದಿನ’ವನ್ನು ಆಚರಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೂರು ಗ್ರಾಮಸ್ಥರಾದ ಎ.ಟಿ.ಮಾದಪ್ಪ ಮಡಿಕೇರಿಯಿಂದ ಕೆ.ನಿಡುಗಣೆಗಾಗಿ ಮಾಂದಲ್ಪಟ್ಟಿಗೆ ಹೋಗುವ ರಸ್ತೆಯ ದೇವಸ್ತೂರು ಸೇತುವೆ ಹತ್ತಿರದಿಂದ ಮುಂದೆ ಕಾರೇರ ಮನೆಯವರೆಗೆ ಅಂದಾಜು 2 ಕಿ.ಮೀ.ನಷ್ಟು ರಸ್ತೆ ಹೊಂಡ, ಗುಂಡಿಗಳಿಂದ ಕೂಡಿ ವಾಹನ ಸಂಚಾರವೆ ಅಸಾಧ್ಯವಾಗಿದೆ. ಇದೇ ಕಾರಣಕ್ಕೆ ಈ ಮಾರ್ಗದಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಕೂಡ ಸ್ಥಗಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಸ್ತೆ ಅವ್ಯವಸ್ಥೆಯಿಂದಾಗಿ ಕಾಲೂರು ಭಾಗದಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರೈತರು, ಕಾರ್ಮಿಕ ಸಮೂಹವೂ ತೊಂದರೆಗೆ ಒಳಗಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿಗಳಿಗೆ ಮನವಿ ಮಾಡಿದ್ದರು ಯಾವುದೇ ಸ್ಪಂದನ ದೊರಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ದೇವಸ್ತೂರಿನಿಂದ ಕಾರೇರ ಮನೆಯವರೆಗೆ ಇರುವ ಗುಂಡಿಗಳನ್ನು ಕೋರೆಕಲ್ಲು ಹುಡಿ ಮಿಶ್ರಿತ ಜಲ್ಲಿ ಕಲ್ಲುಗಳಿಂದ ಮುಚ್ಚಿಸಿ, ಸಂಪರ್ಕ ವ್ಯವಸ್ಥೆ ಕಲ್ಪಸಿಕೊಡುವಂತೆ ಆಗ್ರಹಿಸಿದ ಎ.ಟಿ.ಮಾದಪ್ಪ ಅವರು, ಕಳೆದ 2 ವರ್ಷಗಳಿಂದ ಇರುವ ಈ ಗುಂಡಿಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಇಂಜಿನಿಯರುಗಳಿಗೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು.

ಈ ಮಾರ್ಗಕ್ಕೆ ಪರ್ಯಾಯವಾಗಿರುವ ಕಾಲೂರು-ಗಾಳಿಬೀಡು ರಸ್ತೆಯ ಮೇಲೆ ಮರ ಬಿದ್ದು, ಬರೆಯ ಮಣ್ಣು ಕುಸಿದು, ಸಂಪರ್ಕ ಅಸಾಧ್ಯವಾಗಿ ಪರಿಣಮಿಸಿತ್ತು. ಈ ವಿಚಾರವನ್ನು ಶಾಸಕ ಕೆ.ಜಿ. ಬೋಪಯ್ಯ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ, ಇದೀಗ ರಸ್ತೆಯ ಮೇಲೆ ಬಿದ್ದ ಬರೆಯ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಇತರೆ ಯಾವುದೇ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಸ್ಪಂದನ ನೀಡಿಲ್ಲವೆಂದು ಆರೋಪಿಸಿದ ಮಾದಪ್ಪ ಮಡಿಕೇರಿ ಕ್ಷೇತ್ರದ ಶಾಸಕರು ಗ್ರಾಮದ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕೆಂದು ಒತ್ತಾಯಿಸಿದರು.

ಗಾಳಿಬೀಡು ಗ್ರಾ.ಪಂ ಅಧ್ಯಕ್ಷರು ಹಿಟ್ಲರ್‍ನಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ಅಭಿವೃದ್ಧಿ ಬಗ್ಗೆ ಅಧ್ಯಕ್ಷರಿಗೆ ನೈಜ ಕಾಳಜಿ ಇಲ್ಲವೆಂದು ಟೀಕಿಸಿದರು.

ಗ್ರಾಮಸ್ಥರಾದ ರಾಜಾ ತಮ್ಮಯ್ಯ ಮಾತನಾಡಿ ಗ್ರಾಮದ ರಸ್ತೆ ಅವ್ಯವಸ್ಥೆಗೆ ಶಾಶ್ವತ ಪರಿಹಾರ ಸೂಚಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಲೂರು ಪೊನ್ನಪ್ಪ, ಅಯ್ಯಪ್ಪ ಹಾಗೂ ಮೇದಪ್ಪ ಉಪಸ್ಥಿತರಿದ್ದರು.    (ಕೆಸಿಐ,ಎಸ್.ಎಚ್)

Leave a Reply

comments

Related Articles

error: