ಮೈಸೂರು

ವಿಕಲಚೇತನರ ಹಕ್ಕುಗಳ ಮಸೂದೆಗೆ ಸಂಸತ್‍ ಅಂಗೀಕಾರ : ಮೈಸೂರಿನ ವಿಕಲ ವಿಕಾಸ ಸಂಸ್ಥೆ ಸಂತಸ

ಲೋಕಸಭಾ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ವಿಕಲತೆಯುಳ್ಳ ವ್ಯಕ್ತಿಗಳ ಹಕ್ಕುಗಳ ಮಸೂದೆ-2014 ಅನ್ನು ಸರ್ವಾನುಮತದಿಂದ ಅಂಗೀಕರಿಸಿದ್ದು ಇದರಿಂದ ಸಮಾಜದಲ್ಲಿ ವಿಕಲಚೇತನರಿಗೆ ವಿಶೇಷ ಆದ್ಯತೆ ನೀಡಿದಂತಾಗಿದೆ ಎಂದು ಮೈಸೂರಿನ ವಿಕಲ ವಿಕಾಸದ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಎಸ್. ವೈದ್ಯನಾಥ್ ತಿಳಿಸಿ ಸಂಸತ್‍ಗೆ ಧನ್ಯವಾದ ಅರ್ಪಿಸಿದರು.

ಅವರು, ಭಾನುವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶೇಷ ಚೇತನರ ಹೋರಾಟದ ಫಲವಾಗಿ 2014ರ ಮಸೂದೆಯೂ ಅಂಗೀಕಾರಗೊಂಡಿದ್ದು, ಕಳೆದ ಡಿ.13 ರಂದು ರಾಜ್ಯಸಭೆಯಲ್ಲಿ ಡಿ.16 ರಂದು ಲೋಕಸಭೆಯಲ್ಲಿ ಮಸೂದೆಗೆ ಪಕ್ಷಾತೀತವಾಗಿ ಒಪ್ಪಿಗೆ ದೊರೆಯಿತು. ರಾಷ್ಟ್ರಪತಿಗಳ ಅಂಗೀಕಾರದ ನಂತರ ರಾಷ್ಟ್ರೀಯ ಕಾಯ್ದೆಯಾಗಲಿದೆ. ಇದರಿಂದ ವಿಕಲಚೇತನ ಸರ್ವತೋಮುಖ ಅಭಿವೃದ್ಧಿ ಹಾಗೂ ಹಕ್ಕುಗಳನ್ನು ಹೊಂದಲು ಶಾಸನಬದ್ಧ ಪ್ರಬಲ ಕಾನೂನಾಗಲಿದೆ ಎಂದು ಆಶಿಸಿದರು.

ಮಸೂದೆಯ ಅಂಗೀಕಾರದಿಂದ ವಿಕಲಚೇತನರಿಗೆ ಎಲ್ಲ ರಂಗಗಳಲ್ಲಿಯೂ ಶೇ.4 ರಷ್ಟು ಮೀಸಲಾತಿ ಸೇರಿದಂತೆ ವಿಶೇಷ ಆದ್ಯತೆಯೂ ಲಭಿಸಲಿದೆ. ವಿಶ್ವಸಂಸ್ಥೆಯೂ ವಿಶೇಷ ವ್ಯಕ್ತಿಗಳ ಮಸೂದೆ ಒಡಂಬಡಿಕೆಗೆ ಸಹಿ ಹಾಕಿದೆ. ಕಾಯ್ದೆಯ ಉಲ್ಲಂಘನೆ, ವಿಕಲಚೇತನರ ಶೋಷಣೆ ವಿರುದ್ಧದ ಅಪರಾಧಗಳಿಗೆ ಕನಿಷ್ಠ 6 ತಿಂಗಳಿಂದ 2 ವರ್ಷದವರೆಗೂ ಕಾರಾಗೃಹವಾಸ ಹಾಗೂ 50 ಸಾವಿರದಿಂದ 5 ಲಕ್ಷದ ವರೆಗೂ ದಂಡ ವಿಧಿಸುವ ಮಸೂದೆಯೂ ಅಂಗೀಕರವಾಗಿದ್ದು ಇದರಿಂದ ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿ ಕಾಯ್ದೆಯು ಆಶಾದಾಯಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಕಲಚೇತನರು :

ದೈಹಿಕ, ಮಾನಸಿಕ, ದೃಷ್ಟಿ-ಶ್ರವಣ ದೋಷ, ಕುಷ್ಟರೋಗದಿಂದ ಅಂಗವೈಕಲ್ಯ ಸೇರಿದಂತೆ 7 ಪ್ರಕಾರವನ್ನಷ್ಟೇ ಮಾನ್ಯ ಮಾಡಲಾಗುತ್ತಿತ್ತು. ಸರ್ಕಾರವು ಪ್ರಸ್ತುತ ಮಸೂದೆಯಲ್ಲಿ ಆಟಿಸಂ, ಮೆದುಳು ಪಾರ್ಶ್ವ, ನರಸಂಬಂಧ, ಹಿಮೋಫೀಲಿಯ, ಮೆದುಳು ಮತ್ತು ಬೆನ್ನುಹುರಿ ನ್ಯೂನ್ಯತೆ ಸೇರಿದಂತೆ ಒಟ್ಟು ವರ್ಗೀಕರಣವನ್ನು 21ಕ್ಕೆ ಏರಿಸಿದೆ.

ಅಂಗೀಕಾರವಾದ ವಿಶೇಷ ಹಕ್ಕುಗಳು :

  • ಸರ್ಕಾರದ ಅನುದಾನದ ಅಡಿ 18 ವರ್ಷದವರೆಗೂ ಉಚಿತ ಶಿಕ್ಷಣ.
  • ರಾಷ್ಟ್ರೀಯ ನಿಧಿ ಸ್ಥಾಪನೆ.
  • ಸರ್ಕಾರಗಳ ಸಲಹಾ ಮಂಡಳಿಗಳ ಮೂಲಕ ನೀತಿಗಳನ್ನು ರೂಪಿಸುವಲ್ಲಿ ವಿಕಲಚೇತನರ ಪಾಲ್ಗೊಳ್ಳುವಿಕೆ.
  • ಕುಂದು ಕೊರತೆ ನಿವಾರಣೆ ಮತ್ತು ಹಕ್ಕುಗಳ ಸಂರಕ್ಷಣೆಗಾಗಿ ಅಂಗವಿಕಲರ ಅಧಿನಿಯಮದಡಿ ನೇಮಕಗೊಂಡಿರುವ ಮುಖ್ಯ ಅಯುಕ್ತರು ಹಾಗೂ ಅಯುಕ್ತರುಗಳ ಬದಲಾಗಿ ಶಾಸನಬದ್ಧ ರಾಷ್ಟ್ರೀಯ ಮತ್ತು ರಾಜ್ಯ ಆಯೋಗ, ಹಾಗು ಜಿಲ್ಲಾ ಸಲಹಾ ಸಮಿತಿ ರಚನೆ.
  • ಪ್ರತಿ ಜಿಲ್ಲೆಗಳಲ್ಲಿಯೂ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಕಲಚೇತನರಿಗೆ ಶೋಷಣೆ, ಹಕ್ಕುಗಳ ತಾರತಮ್ಯತೆ, ಹಕ್ಕುಗಳ ಸಂರಕ್ಷಣೆ, ಹಿಂಸೆ ಮತ್ತು ಕ್ರೂರತೆ, ದೌರ್ಜನ್ಯಗಳಿಗೆ ನ್ಯಾಯ ದೊರಕಿಸಲು ವಿಶೇಷ ನ್ಯಾಯಾಲಯದ ಸ್ಥಾಪನೆ ಮತ್ತು ವಿಶೇಷ ಅಭಿಯೋಜಕರ ನಿಯೋಜನೆಗೊಳ್ಳಲಿದೆ ಎಂದು ತಿಳಿಸಿದರು.

ಹೋರಾಟಕ್ಕೆ ಬೆಂಬಲಿಸಿದ ಸ್ವಯಂಸೇವಾ ಸಂಸ್ಥೆಗಳಿಗೆ, ಜನಪ್ರತಿನಿಧಿಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಧನ್ಯವಾದ ಅರ್ಪಿಸಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಮುನಿರಾಜು, ಕಾರ್ಯದರ್ಶಿ ರಾಚಪ್ಪ, ಮೈಸೂರು ವಿವಿಯ ಲಲಿತಕಲೆ ವಿಭಾಗದ ಕಾರ್ಯನಿರ್ವಾಹಕ ಡಾ. ಉದಯಕಿರಣ್‍, ಖಜಾಂಚಿ ರವಿಕುಮಾರ್, ಸರುಗೂರು ಸ್ವಾಮಿ ವಿವೇಕಾನಂದ ಮೆಮೋರಿಯಲ್‍ನ ರಮೇಶ್, ಪ್ರಾಚಾರ್ಯ ರಘುನಾಥ್‍ ಗೌಡ ಉಪಸ್ಥಿತರಿದ್ದರು.

Leave a Reply

comments

Related Articles

error: