ಕರ್ನಾಟಕ

ಸಹಕಾರಿ ಚುನಾವಣೆ ಶಿಕ್ಷಣ ಕಾರ್ಯಕ್ರಮ : ಸಹಕಾರ ಸಂಘಗಳ ಕಾಯ್ದೆ ಅನುಸರಿಸಲು ಮನುಮುತ್ತಪ್ಪ ಸಲಹೆ

ರಾಜ್ಯ(ಮಡಿಕೇರಿ )ಜು.28 : – ಸಹಕಾರ ಸಂಘಗಳ ಚುನಾವಣಾ ಸಂದರ್ಭದಲ್ಲಿ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಹಾಗೂ ಸಹಕಾರ ಸಂಘಗಳ ಕಾಯ್ದೆ ಪ್ರಕಾರವೇ ಚುನಾವಣೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಹಾಗೂ  ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಸಲಹೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್   ಸಂಯುಕ್ತಾಶ್ರಯದಲ್ಲಿ ಚುನಾವಣೆ ಇರುವ ಸಹಕಾರ ಸಂಘಗಳ ರಿಟರ್ನಿಂಗ್ ಅಧಿಕಾರಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಸಹಕಾರಿ ಚುನಾವಣೆ ಕುರಿತಾದ ಶಿಕ್ಷಣ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 101 ಸಹಕಾರ ಸಂಘಗಳ ಚುನಾವಣೆ ನಡೆಯಲಿದ್ದು, ಈ ಚುನಾವಣೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳಿಂದ ನೇಮಕವಾಗಿರುವ ಅಧಿಕಾರಿಗಳಿಗೆ ಈ ಶಿಕ್ಷಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇಲ್ಲಿ ನೀಡಲಾಗುವ ಮಾಹಿತಿಯ ಪ್ರಯೋಜನ ಪಡೆದುಕೊಂಡು ಚುನಾವಣೆಯನ್ನು ಸುಸೂತ್ರವಾಗಿ ನಡೆಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಜಿಲ್ಲೆಯ ಕೆಲವೆಡೆಗಳಲ್ಲಿ ಸಂಘ ಸಂಸ್ಥೆಗಳ ಚುನಾವಣೆಗಳು ಸುಸೂತ್ರವಾಗಿ ನಡೆದರೆ ಮತ್ತೆ ಕೆಲವೆಡೆಗಳಲ್ಲಿ ಬಾರೀ ಪೈಪೋಟಿಯಿಂದ ನಡೆಯುತ್ತದೆ. ಆದ್ದರಿಂದ ಎಷ್ಟೇ ತೊಂದರೆಯಾದರೂ ತೀವ್ರತೆ ಎದುರಿಸಲು ಅಧಿಕಾರಿ ವರ್ಗ ಸಿದ್ಧರಿರಬೇಕು.  ಸಂಘ-ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ, ಕಾಯ್ದೆಗಳಲ್ಲಿ ತಿದ್ದುಪಡಿಗಳು ಆಗುತ್ತಲೇ ಇರುವುದರಿಂದ ಇಂದಿನ ಈ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದು ಮನು ಮುತ್ತಪ್ಪ ತಿಳಿಸಿದರು. ಪ್ರಸ್ತುತ ಸಹಕಾರ ಸಂಘಗಳ ಚುನಾವಣೆಗಾಗಿಯೇ ಸಹಕಾರ ಚುನಾವಣಾ ಪ್ರಾಧಿಕಾರವನ್ನು ರಚಿಸಲಾಗಿದೆ. ಈ ರೀತಿ ಕಾಯ್ದೆಗಳನ್ನು ಸರ್ಕಾರ ರೂಪಿಸಿರುವುದು ಸಹಕಾರ ಸಂಘಗಳ ಬಲವರ್ಧನೆಗಾಗಿ ಎಂಬುದನ್ನು ತಿಳಿಯಬೇಕಿದೆ.  ವಾಣಿಜ್ಯ ಬ್ಯಾಂಕುಗಳಿಗಿಂತ ಉತ್ತಮವಾಗಿ ಸಹಕಾರಿ ಬ್ಯಾಂಕ್‍ಗಳು ಬೆಳೆಯುತ್ತಿದ್ದು, ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರೆಯುತ್ತಿವೆ. ಸದಸ್ಯರ ಆರ್ಥಿಕ ಸ್ಥಿತಿ-ಗತಿಯು ಉತ್ತಮಗೊಳ್ಳುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಹಕಾರ ಸಂಘಗಳ ನಿವೃತ್ತ ಉಪನಿಬಂಧಕ   ವಿ. ನಟರಾಜನ್ ಅವರು, ಸಹಕಾರ ಚುನಾವಣಾ ವಿಧಾನ, ರಿಟರ್ನಿಂಗ್ ಅಧಿಕಾರಿಗಳ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರಮುಖ ಕೆಲಸ-ಕಾರ್ಯಗಳು ಇತ್ಯಾದಿ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪಿ.ಸಿ. ಅಚ್ಚಯ್ಯ, ನಿರ್ದೇಶಕರುಗಳಾದ   ಡಿ.ಪಿ. ಬೋಪಣ್ಣ,   ಕೆ.ಕೆ. ಮಂದಣ್ಣ,  ಪ್ರೇಮಾ ಸೋಮಯ್ಯ,   ಕೆ.ಎಂ. ತಮ್ಮಯ್ಯ,   ಎನ್.ಎ. ರವಿಬಸಪ್ಪ, ಸಹಕಾರ ಸಂಘಗಳ ಉಪನಿಬಂzಕ ಡಿ. ಭಾಸ್ಕರಾಚಾರ್ ಉಪಸ್ಥಿತರಿದ್ದರು.

ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಕನ್ನಂಡ ಸಂಪತ್ ಸ್ವಾಗತಿಸಿದರೆ,   ಯೂನಿಯನ್ ವ್ಯವಸ್ಥಾಪಕಿ   ಆರ್. ಮಂಜುಳಾ ಪ್ರಾರ್ಥಿಸಿದರು.   ಮುಖ್ಯ ಕಾರ್ಯನಿರ್ವಹಣಾಧಿಕಾರಿ   ಯೋಗೇಂದ್ರ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: