ಮೈಸೂರು

ಕೃತಿ ಅನುವಾದ ಮಾಡಲು ಭಾಷೆಯ ಮೇಲೆ ಹಿಡಿತವಿರಬೇಕು: ಆತ್ಮಜ್ಞಾನಂದ್ ಜೀ

ಯಾವುದೇ ಕೃತಿಯನ್ನು ಅನುವಾದ ಮಾಡಬೇಕಾದರೆ ಭಾಷೆಯ ಮೇಲೆ ಹಿಡಿತವಿರಬೇಕಾಗುತ್ತದೆ ಎಂದು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಆತ್ಮಜ್ಞಾನಂದ್ ಜೀ ಮಹಾರಾಜ್ ತಿಳಿಸಿದರು.

ವಿಸ್ಮಯ ಪ್ರಕಾಶನ ಮತ್ತು ಮಹಿಮಾ ಪ್ರಕಾಶನದ ವತಿಯಿಂದ ಭಾನುವಾರ ಮೈಸೂರಿನ ರಂಗಾಯಣದ ವನರಂಗದಲ್ಲಿ ಪ್ರೊ. ಜಿ. ಚಂದ್ರಶೇಖರ್ ಅವರ ‘ಯೋಗ, ಧ್ಯಾನ, ಪ್ರಾಣಾಯಾಮ’ ಮತ್ತು ‘ರಕ್ತ ಧ್ವಜ’ ಕೃತಿಗಳನ್ನು ಆತ್ಮಜ್ಞಾನಂದ್ ಜೀ ಮಹಾರಾಜ್ ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಅವರು, ಯಾವುದೇ ಕೃತಿಯನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವಾಗ ಭಾಷೆಯ ಲಾಲಿತ್ಯ, ಭಾವನೆಗಳ ಸಂವೇದನೆ ಮತ್ತು ಪದಗಳ ಜೋಡಣೆ ಸಮರ್ಪಕವಾಗಿರಬೇಕು. ಎರಡು ಭಾಷೆಗಳ ಮೇಲೂ ಹಿಡಿತವಿರಬೇಕು. ಅಂತೆಯೇ ಪ್ರಕಾಶನ ಕೂಡ ಈ ಸಂದರ್ಭದಲ್ಲಿ ಮುಖ‍್ಯವಾಗುತ್ತದೆ.

ರಕ್ತಧ್ವಜ ನಾಟಕ ಕೃತಿ ಹಳ್ಳಿಗಾಡಿನ ಯೋಧರು, ಬಿಲ್ಲ ಜನಾಂಗದವರು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಕಥೆಯಾಗಿದೆ. ಬಲಿದಾನದ ಮಹಿಮೆಯನ್ನು ತಿಳಿಸುವ ಕೃತಿಯಾಗಿದೆ. ಎಲ್ಲರೂ ಈ ಪುಸ್ತವನ್ನು ಓದಬೇಕು. ಅಂತೆಯೇ ಯೋಗ, ಧ್ಯಾನ, ಪ್ರಾಣಾಯಾಮ ಕೃತಿಯು ಸಹ ಮುಖ್ಯವಾಗಿದ್ದು, ಯೋಗದ ಮಹತ್ವವನ್ನು ಕೃತಿಯಲ್ಲಿ ಹೇಳಲಾಗಿದೆ. ವೈಯುಕ್ತಿಕ ಮತ್ತು ಸಾಂಸಾರಿಕ ಜೀವನದಲ್ಲಿ ಯೋಗ ಎಷ್ಟು ಮುಖ್ಯವಾಗುತ್ತದೆ. ಪ್ರಾಣಾಯಾಮದ ಮೂಲಕ ಮನಸ್ಸನ್ನು ಹತೋಟಿಗೆ ತರಬಹುದಾಗಿದೆ ಎಂದು ಹೇಳಿದರು.

ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಕೆ. ರಾಘವೇಂದ್ರ ಆರ್. ಪೈ ಮಾತನಾಡಿ ಇಂದಿನ ದಿನಗಳಲ್ಲಿ ರೋಗ ಬಂದವರು ಮತ್ತು ವಯಸ್ಸಾದವರು ಮಾತ್ರ ಯೋಗಾಭ‍್ಯಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಯೋಗ ಎಲ್ಲರಿಗೂ ಅತಿಮುಖ‍್ಯವಾದ ಉತ್ತಮ ಅಭ್ಯಾಸವಾಗಿದೆ. ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಮೈಸೂರಿನಲ್ಲಿ ಯೋಗಾಭ‍್ಯಾಸ ಕೇಂದ್ರಗಳು ಹೆಚ್ಚಾಗಿವೆ. ಮೈಸೂರು ವಿಶ್ವದ ಯೋಗ ರಾಜಧಾನಿ ಎಂದು ಗುರುತಿಸಲ್ಪಟ್ಟಿದೆ. ಆದರೆ 5 ವಿಶ್ವವಿದ್ಯಾನಿಲಯಗಳಿದ್ದರೂ ಸಹ ಅಲ್ಲಿ ಸರಿಯಾದ ಯೋಗ ತರಬೇತಿ ಕೇಂದ್ರಗಳು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭ ನಮ್ಮ ಭಾರತೀಯ ಯೋಗವನ್ನು ಪ್ರಪಂಚಕ್ಕೆ ಪರಿಚಯಿಸಲ್ಪಟ್ಟ ಮಹನೀಯರನ್ನು ಸ್ಮರಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕೃತಿಯ ಕರ್ತೃ ಪ್ರೊ. ಜಿ. ಚಂದ್ರಶೇಖರ್, ರಕ್ತಧ್ವಜ ಕೃತಿ ಕನ್ನಡದಲ್ಲಿ ಒಂದು ಹೊಸ ಪ್ರಯೋಗವಾಗಿದೆ. ‘ಮನಗಡ್ ಹತ್ಯಾಕಾಂಡ’ ಎಂದು ಹೇಳಬಹುದಾಗಿದೆ. 1500 ಬಿಲ್ಲ ಜನಾಂಗದವರ ಬಲಿದಾನ ಮತ್ತು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ನಾಟಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಂಗಾಯಣದ ನಿರ್ದೇಶಕ ಜನಾರ್ದನ್, ವಿಸ್ಮಯ ಪ್ರಕಾಶನದ ಡಾ.ಹಾಲತಿ ಸೋಮಶೇಖರ್, ಮಹಿಮಾ ಪ್ರಕಾಶನದ ಕೆ.ವಿ. ಶ್ರೀನಿವಾಸ್ ಉಪಸ್ಥಿತರಿದ್ದರು.

Leave a Reply

comments

Related Articles

error: