ಪ್ರಮುಖ ಸುದ್ದಿ

ವಿದ್ಯಾಸಂಸ್ಥೆಗಳ ಮನಸ್ಥಿತಿ ಬದಲಾದರೆ ಮಾತ್ರ ಮೌಲ್ಯಯುತ ಶಿಕ್ಷಣ ಸಾಧ್ಯ : ನಂಜಾವಧೂತ ಶ್ರೀ

ರಾಜ್ಯ(ಬೆಂಗಳೂರು),ಜು.30:- ಮಕ್ಕಳನ್ನು ಕೇವಲ ಅಂಕಗಳಿಗೆ ಸೀಮಿತಗೊಳಿಸುತ್ತಿರುವ ಪೋಷಕರು ಹಾಗೂ ವಿದ್ಯಾಸಂಸ್ಥೆಗಳ ಮನಸ್ಥಿತಿ ಬದಲಾದರೆ ಮಾತ್ರ ಮೌಲ್ಯಯುತ ಶಿಕ್ಷಣ ಸಾಧ್ಯ ಎಂದು ನಂಜಾವಧೂತ ಶ್ರೀಗಳು ತಿಳಿಸಿದರು.

ಒಕ್ಕಲಿಗರ ಒಕ್ಕೂಟದಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಜಾನಪದ ಸಂಭ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಗುಣಮಟ್ಟದ ಶಿಕ್ಷಣ ನೀಡುವ ನೆಪದಲ್ಲಿ ವಿದ್ಯಾಸಂಸ್ಥೆಗಳು ಭಾವನೆಗಳ ಕೊರತೆ ಸೃಷ್ಟಿಸುತ್ತಿವೆ. ಮೌಲ್ಯವಿಲ್ಲದ, ಭಾವನೆಗಳಿಲ್ಲದ ತನ್ನ ತನವನ್ನು ಪ್ರೀತಿಸದ ಪ್ರಾಮಾಣಿಕ ಮನಸ್ಥಿತಿ ಇಲ್ಲದ ಸ್ಥಿತಿಯಿಂದ ಕಲಿಯುವ ವಿದ್ಯೆಯಿಂದ ಬದ್ಧತೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರು ಬದ್ಧತೆ ಪ್ರದರ್ಶಿಸಬೇಕು ಎಂದರು.

ರಾಜ ಸ್ವದೇಶದಲ್ಲಿ ಗೌರವಿಸಲ್ಪಡುತ್ತಾನೆ. ಆದರೆ ವಿದ್ಯಾವಂತ ಜಗತ್ತಿನ ಎಲ್ಲಾ ಪ್ರದೇಶಗಳಲ್ಲಿಯೂ ಗೌರವಿಸಲ್ಪಡುತ್ತಾನೆ. ಇದು ವಿದ್ಯೆಗಿರುವ ಮಹತ್ವ ಹಾಗೂ ಶಕ್ತಿ ಎಂದ ಅವರು, ಪ್ರಸ್ತುತ ದಿನಗಳಲ್ಲಿ ರೂಢಿಯಲ್ಲಿರುವ ಪ್ಯಾಕೇಜ್ ಶಿಕ್ಷಣ ವ್ಯವಸ್ಥೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು. ವ್ಯವಸ್ಥೆಯೊಂದಿಗೆ ರಾಜೀ ಮಾಡಿಕೊಳ್ಳುತ್ತಿರುವವರಿಗೆ ಉತ್ತಮ ಸ್ಥಾನಮಾನಗಳು ಲಭಿಸುತ್ತಿವೆ. ರಾಜಿ ಮಾಡಿಕೊಳ್ಳಲಿಚ್ಛಿಸದ ಪ್ರಾಮಾಣಿಕರಿಗೆ ಸ್ಥಾನಮಾನಗಳ ಕೊರತೆ ಉಂಟಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಪ್ರಾಮಾಣಿಕರಿಗೆ ಗೌರವ ಇಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ ಎಂದರು. ಜ್ಞಾನಕ್ಕೆ ಸಿಗದ ವಿಚಾರಗಳೇ ಇಲ್ಲ. ಬಳಸಿದಷ್ಟು ಹೆಚ್ಚುವ ಸಂಪತ್ತು ಎಂದರೆ ಅದು ವಿದ್ಯೆ ಮಾತ್ರ. ವಿದ್ಯೆಯನ್ನು ಸಂಪತ್ತನ್ನಾಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಇದರೊಂದಿಗೆ ಶಾಸಕರಾದ ವಿಶ್ವನಾಥ್, ನಾರಾಯಣಗೌಡ, ಸೌಮ್ಯರೆಡ್ಡಿ ಪೊಲೀಸ್ ಅಧಿಕಾರಿ ಸಿರಿ ಗೌರಿ ಅವರ ಸಾಧನೆ ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಒಕ್ಕಲಿಗ ಒಕ್ಕೂಟದ ರಾಜ್ಯಾಧ್ಯಕ್ಷ ಟಿ.ಬಿ. ದೇವರಾಜ್, ಶಾಸಕ ನಾರಾಯಣಗೌಡ, ಮೋಹನ್‌ಕುಮಾರ್, ಕಾಂಗ್ರೆಸ್ ಮುಖಂಡ ಶಿವಕುಮಾರ್, ಸೌಮ್ಯ ರೆಡ್ಡಿ, ಉದ್ಯಮಿ ಶ್ರೀಕುಮಾರ್, ಸಂಘದ ಗೌರವಾಧ್ಯಕ್ಷ ಮಾಯಣ್ಣ, ಡಾ.ಸಿ.ಎನ್. ಮೂರ್ತಿ, ಚಂದ್ರಶೇಖರ್ ರೆಡ್ಡಿ, ಸುರೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: