ಪ್ರಮುಖ ಸುದ್ದಿ

ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಕಟಿಬದ್ಧನಾಗಿದ್ದೇನೆ : ಮಾಜಿ ಸಚಿವ ಬಿ.ಎ.ಜೀವಿಜಯ

ರಾಜ್ಯ(ಮಡಿಕೇರಿ)ಜು.30:-  ಕ್ಷೇತ್ರದ ಜನತೆ ತಮಗೆ ರಾಜಕೀಯ ಶಕ್ತಿ ನೀಡದಿದ್ದರೂ, ರಾಜ್ಯದಲ್ಲಿ ಜೆಡಿಎಸ್ ಸರ್ಕಾರವಿರುವುದರಿಂದ ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಕಟಿಬದ್ಧನಾಗಿದ್ದೇನೆ. ಈ ನಿಟ್ಟಿನಲ್ಲಿ ಜನತೆ ಆತ್ಮಸ್ಥೈರ್ಯ ತುಂಬಬೇಕೆಂದು ಮಾಜಿ ಸಚಿವ ಬಿ.ಎ.ಜೀವಿಜಯ ಹೇಳಿದರು.

ಸೋಮವಾರಪೇಟೆಯ  ಒಕ್ಕಲಿಗರ ಸಮುದಾಯಭವನದಲ್ಲಿ ಜೆಡಿಎಸ್ ಪಕ್ಷ ಆಯೋಜಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಹಲವಾರು ರಸ್ತೆ, ಸೇತುವೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾದ ಅನಿವಾರ್ಯತೆ ಇದೆ. ಇಂತಹ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಂಕೇತ್‍ಪೂವಯ್ಯ ಅವರು ರಾಜಿನಾಮೆ ನೀಡಿರುವುದು ಸಮಂಜಸವಲ್ಲ. ಹೀಗಾಗಿ ಪಕ್ಷದ ಜಿಲ್ಲೆ ಹಾಗೂ ತಾಲೂಕಿನ ಎಲ್ಲಾ ಘಟಕಗಳನ್ನು ವಿಸರ್ಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ತುರ್ತಾಗಿ ಎಲ್ಲಾ ಘಟಕಗಳಿಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದರು.  ಕುಶಾಲನಗರದ ಕಾವೇರಿ ನಿಸರ್ಗಧಾಮ ನಿರ್ವಹಣೆಗೆ ರೂ.2ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಈ ಹಣವನ್ನು ಸರಿಯಾಗಿ ವಿನಿಯೋಗಿಸದೆ ಅಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭೃಷ್ಟ ಅಧಿಕಾರಿಗಳನ್ನು ಕರ್ತವ್ಯ ನಿರ್ವಹಿಸಲು ಬಿಡುವುದಿಲ್ಲ. ಅಂತಹವರನ್ನು ಹೊರ ಕಳಿಸಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.  ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವುದರಿಂದ ಜಿಲ್ಲೆಯ ಸ್ಥಳೀಯ ಸಂಸ್ಥೆ ಹಾಗೂ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಲು ಒತ್ತಾಯ ಹೆಚ್ಚಾಗುತ್ತಿದೆ. ಆದರೆ ತಾವು ಚುನಾವಣೆಗೆ ಸ್ಪರ್ಧಿಸಲು ಮನಸ್ಸಾಗುತ್ತಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಜನರ ಸೇವೆ ಮಾಡುವೆ ಎಂದು ಸ್ಪಷ್ಟಪಡಿಸಿದರು.

ಸಂಕೇತ್ ಪೂವಯ್ಯ ಅವರಿಂದ ತೆರವಾಗಿರುವ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಜೀವಿಜಯ ಅವರ ಪುತ್ರ ಸೇರಿದಂತೆ  ನಾಲ್ವರು ಪ್ರಬಲ ಆಕಾಂಕ್ಷಿಗಳಿದ್ದು, ಆ ಪೈಕಿ ಮುಖಂಡರಾದ ಬಗ್ಗನ ಅನಿಲ್, ಕೆ.ಟಿ.ಪರಮೇಶ್, ಕಾಟ್ನಮನೆ ವಿಠಲ್‍ಗೌಡ ಅವರು ಸೇರಿದ್ದಾರೆ. ಆದರೆ ಕಾರ್ಯಕರ್ತರ ಅಭಿಪ್ರಾಯ ಪಡೆದು ಜೆಡಿಎಸ್ ವರಿಷ್ಠರಿಗೆ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ವಿ.ನಾಗೇಶ್ ತಿಳಿಸಿದರು.

ಸಭೆಯು ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್.ಸುರೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಜಿಲ್ಲಾ ಜೆಡಿಎಸ್ ಮಹಾಪ್ರಧಾನಕಾರ್ಯದರ್ಶಿ ಎಸ್.ಎಂ.ಡಿಸಿಲ್ವಾ, ಮುಖಂಡರಾದ ಸಂಜಯ್ ಜೀವಿಜಯ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್, ಪಕ್ಷದ ಪ್ರಮುಖರಾದ ರಾಜಾರಾವ್, ಮನೋಜ್ ಬೋಪಯ್ಯ, ಸಿ.ಪಿ.ಪುಟ್ಟರಾಜು, ಎಚ್.ಬಿ.ಜಯಮ್ಮ, ಸಿ.ಎಲ್.ವಿಶ್ವ, ಪ್ರವೀಣ್, ಜಾನಕಿ ವೆಂಕಟೇಶ್, ಸಾಂತ್ವೇರಿ ವಸಂತ್, ಕೆ.ಸಿ.ನಾಣಯ್ಯ, ಮತ್ತಿತರರು ಇದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: