ಮೈಸೂರು

ಸಾಹಿತ್ಯದ ಮೂಲಕವೇ ಕ್ರಾಂತಿ ನಡೆಸಿದವರು ಕವಿ ಕುವೆಂಪು : ಪ್ರೊ.ಸಿ.ಪಿ.ಸಿದ್ದಾಶ್ರಮ

ಮೈಸೂರು,ಜು.31:- ಕವಿ ಕುವೆಂಪುರವರ ಧನ್ವಂತರಿ ಚಿಕಿತ್ಸೆ ಕಥಾ ಸಂಕಲನದಲ್ಲಿ ಕಂಡ ರೈತನ ಚಿತ್ರಣವೇ ಇಂದಿಗೂ ಮುಂದುವರಿದಿರುವುದು ವಿಷಾದನೀಯ ಎಂದು ಕುವೆಂಪು ಕಾವ್ಯಾಧ್ಯಯನ  ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಸಿ.ಪಿ.ಸಿದ್ದಾಶ್ರಮ ಬೇಸರ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿಂದು ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕುವೆಂಪು ಕಾವ್ಯಾಧ್ಯಯನ ಪೀಠ ಸಹಯೋಗದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕುವೆಂಪು ಅವರ ಕಥೆಗಳ ಅನನ್ಯತೆ ಕುರಿತು ಉಪನ್ಯಾಸ ನೀಡಿದರು. ಕುವೆಂಪುರವರು ನಾಟಕಗಳು, ಕಾದಂಬರಿಗಳು, ಖಂಡಕಾವ್ಯ, ಮಹಾಕಾವ್ಯಗಳನ್ನು ರಚಿಸಿದ್ದಾರೆ. ಇವರನ್ನು ಆಧುನಿಕ ಕಾಲಘಟ್ಟದ ಬಂಡಾಯ ಸಾಹಿತಿ, ಕ್ರಾಂತಿಕಾರಿ ಸಾಹಿತಿ ಎಂದೇ ಗುರುತಿಸಲಾಗುತ್ತದೆ. ಸಾಮಾಜಿಕ, ಆರ್ಥಿಕ,ರಾಜಕೀಯ ಅಸಮಾನತೆಯನ್ನು ತೊಡೆದು ಸಮಸಮಾಜ ಕಟ್ಟಬೇಕು ಎಂದು ಸಾಹಿತ್ಯದ ಮೂಲಕವೇ ಚಳವಳಿ ಆರಂಭಿಸಿದರು. ಕುವೆಂಪು ಅವರು ತಮ್ಮ ಧನ್ವಂತರಿ ಚಿಕಿತ್ಸೆಯಲ್ಲಿ ಕಂಡ ರೈತ ಬೇರೆ ಅಲ್ಲ. 21ನೇ ಶತಮಾನದ ರೈತನ ಸ್ಥಿತಿ ಬೇರೆ ಅಲ್ಲ. ರೈತ ದೇಶದ ಬೆನ್ನೆಲುಬು, ಉತ್ತು ಬಿತ್ತು ಕಷ್ಟಪಟ್ಟು ಅನ್ನ ಕೊಡುತ್ತಾನೆ. ಆದರೆ ಅವನ ಸ್ಥೀತಿಗತಿ, ಶೋಷಣೆ ಇಂದಿಗೂ ಮುಂದುವರಿದಿದೆ. ಇವತ್ತಿಗೂ ಅದು ಕಡಿಮೆ ಆಗಿಲ್ಲ. ರೈತರ ಆತ್ಮಹತ್ಯೆ ನಡೆಯುತ್ತಲೇ ಇದೆ.ರೈತರ ಸಂಪೂರ್ಣ ಸಾಲ ಮನ್ನಾಮಾಡುತ್ತೇವೆ ಎಂದರು. ಆದರೆ ಮಾಡಲೇ ಇಲ್ಲ. ರೈತ ಶೋಷಣೆಗೊಳಗಾದ ವ್ಯಕ್ತಿಯಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಕುವೆಂಪುರವರ ಇನ್ನೂ ಹಲವು ಕಥೆಗಳ ಕುರಿತು ತಿಳಿಸಿದರು.

ಈ ಸಂದರ್ಭ ಕುವೆಂಪುಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: