ಮೈಸೂರು

ವ್ಯಾಪ್ತಿ ಮೀರಿ ಬಳಕೆಯಾದ ಮೂಡಾ ಅನುದಾನ : ಕ್ರಮಕ್ಕೆ ಒತ್ತಾಯ

ಮೈಸೂರು, ಜು.31 : ಮಹಾ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿಲ್ಲದ ಗ್ರಾಮಗಳಲ್ಲಿಯೂ ಜನಪ್ರತಿನಿಧಿಗಳ ಪ್ರಭಾವ ಕಾರಣ ಪ್ರಾಧಿಕಾರ ಸಾವಿರಾರು ಕೋಟಿ ರೂ.ಗಳ ಟೆಂಡರ್ ಕರೆದು ಬೇಕದವರಿಗೆ ಕಾಮಗಾರಿ ನೀಡಿರುವುದು ಖಂಡನೀಯವಾಗಿದ್ದು, ಕೂಡಲೇ ಕಾಮಗಾರಿ ನಿಲ್ಲಿಸಿ ಮುಡಾ ವ್ಯಾಪ್ತಿಯ ಬಡಾವಣೆಗಳ ಅಭಿವೃದ್ಧಿಗೆ ಬಳಸಬೇಕೆಂದು ಮೈಸೂರು ರಕ್ಷಣಾ ವೇದಿಕೆ ಆಗ್ರಹಿಸಿದೆ.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಎಂ.ಎ. ಮೋಹನ್, ತಾವು ಅಭಿವೃದ್ಧಿ ಕಾರ್ಯಗಳ ವಿರೋಧಿಯಲ್ಲದಿದ್ದರೂ, ಕಳೆದ ಚುನಾವಣೆಯಲ್ಲಿ ರಾಜಕಾರಣಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದಲೇ ಈ ಕಾಮಗಾರಿ ಕೈಗೊಂಡಿದ್ದು, ಅವುಗಳ ವ್ಯಾಪ್ತಿಗೆ ತಾಪಂ, ಗ್ರಾಪಂಗಳಿಂದ ಹಣ ಬರುವಂತಿದ್ದರೂ, ಮುಡಾ ಅಲ್ಲಿ ಕೈಗೊಂಡಿದ್ದನ್ನು ವಿರೋಧಿಸುವುದಾಗಿ ತಿಳಿಸಿದರು.

ಅಲ್ಲದೆ, ಪ್ರಾಧಿಕಾರವು ಬಡಾವಣೆ ನಿರ್ಮಿಸುವ ಸಲುವಾಗಿ ರೈತರಿಂದ ಕಳೆದ ೨೫ ರಿಂದ ೩೦ ವರ್ಷಗಳ ಅವಧಿಯಲ್ಲಿ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಸಂಬಂಧಪಟ್ಟಂತೆ ರೈತರಿಗೆ ಪರಿಹಾರ ನೀಡದೇ ಸತಾಯಿಸುತ್ತಿದೆ. ಹೀಗಾಗಿ ಆಗಿಂದಾಗ್ಯೆ ರೈತರು ನ್ಯಾಯಾಲಯದ ಆದೇಶದಂತೆ ಭೂಸ್ವಾಧೀನ ಇಲಾಖೆಯ ಪೀಠೋಪಕರಣ ವಶಕ್ಕೆ ತೆಗೆದುಕೊಳ್ಳುವುದು ಮುಂದುವರಿದಿದ್ದು, ಈ ನಾಚಿಕೆಗೇಡಿನ ಪರಿಸ್ಥಿತಿಯಿಂದ ಪಾರಾಗಲು ಪ್ರಾಧಿಕಾರ ಕೂಡಲೇ ಬಡ್ಡಿಯೊಡನೆ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಅಲ್ಲದೆ, ಮುಡಾ ಆಗಿಂದಾಗ್ಯೆ ಮೂಲೆ ನಿವೇಶನ ಹರಾಜು ಮೂಲಕ ಕೋಟಿಗಟ್ಟಲೆ ಹಣ ಸಂಗ್ರಹಿಸುತ್ತಿದ್ದರೂ, ಅದು ಏನಾಗುತ್ತಿದೆ ಎಂಬುದು ತಿಳಿಯಬೇಕಾಗಿದೆ ಎಂದು ಹೇಳಿದ ಅವರು, ಕೂಡಲೇ ಮುಡಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆ ಹಣ ಪೋಲು ಮಾಡುವುದು ನಿಲ್ಲಿಸಬೇಕೆಂದು ಆಗ್ರಹಿಸಿದರು.

ಕುಮಾರ್‌ಗೌಡ, ಮೈ.ಕಾ. ಪ್ರೇಮ್‌ಕುಮಾರ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: