ಮೈಸೂರು

ವಾರ್ಡ್ ನಂ. 47ಕ್ಕೆ ಭೇಟಿ ನೀಡಿದ ಶಾಸಕ ಎಸ್.ಎ.ರಾಮದಾಸ್

ಮೈಸೂರು,ಜು.31-ನಗರದ ಕುವೆಂಪುನಗರ, ಸರಸ್ವತಿಪುರಂ, ಟಿ.ಕೆ.ಬಡಾವಣೆ ಪ್ರದೇಶವಾದ ನೂತನ 47ನೇ ವಾರ್ಡ್ ಗೆ ಭೇಟಿ ನೀಡಿದ ಶಾಸಕ ಎಸ್.ಎ.ರಾಮದಾಸ್ ಸಾರ್ವಜನಿಕರಿಂದ ಸಮಸ್ಯೆಗಳ ಅಹವಾಲು ಸ್ವೀಕರಿಸಿದರು.

ವಾರ್ಡ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಕೆಲ ಪ್ರದೇಶಗಳಲ್ಲಿ ಬೋರ್ ವೆಲ್ ಮತ್ತು ಕಬಿನಿ ನೀರು ಒಟ್ಟಿಗೆ ಬರುತ್ತಿದೆ ಎಂದು ದೂರಿದರು. ಅಲ್ಲದೆ ಮಹಿಳೆಯರು ಶೇಖರಿಸಿ ಇಟ್ಟಿದ್ದ ನೀರನ್ನು ತಂದು ಶಾಸಕರಿಗೆ ತೋರಿಸಿದರು.

ಕುಡಿಯುವ ನೀರನ್ನು ಬೆಳಿಗ್ಗೆ 4  ರಿಂದ 8  ಗಂಟೆಯವರೆಗೆ ಬಿಡಬೇಕು. ನಂತರ ಸಮಸ್ಯೆ ಇದ್ದಲ್ಲಿ ಬೋರ್ ವೆಲ್ ನೀರನ್ನು 8 ಗಂಟೆಯ ನಂತರ ಬಿಡಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರು ಮತ್ತು ಬೋರ್ ವೆಲ್ ನೀರನ್ನು ಒಟ್ಟಿಗೆ ಬಿಡಬಾರದು ಎಂದು ಸೂಚಿಸಿದರು.

ವಾರ್ಡ್ ನಲ್ಲಿರುವ ಒಳಚರಂಡಿ ಸಮಸ್ಯೆಯಿರುವ ಸ್ಥಳಗಳನ್ನು ಗುರುತಿಸಿ ಸಮಸ್ಯೆ ಬಗೆಹರಿಸಲು ಸಮಗ್ರವಾಗಿ ಚರ್ಚಿಸಿ ಯೋಜನೆ ರೂಪಿಸಬೇಕು. ಮಳೆ ನೀರು ಹೋಗುವ ಚರಂಡಿಯಲ್ಲಿ ಹೂಳು ತುಂಬಿದ್ದು, ಮಳೆ ನೀರು ರಸ್ತೆಗೆ ನುಗ್ಗಿ ತೊಂದರೆಯಾಗುತ್ತಿರುವ ಬಗ್ಗೆ ತಿಳಿದು ತಕ್ಷಣವೇ ಚರಂಡಿಯಲ್ಲಿರುವ ಹೂಳು ತೆಗೆಸಿ ಮಳೆ ನೀರು ಸರಾಗವಾಗಿ ಹೋಗುವಂತೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜೆಎಸ್ಎಸ್ ಕಾನೂನು ಕಾಲೇಜು ಹಿಂಭಾಗದಲ್ಲಿರುವ ಉದ್ಯಾನದಲ್ಲಿ ಮದ್ಯಪಾನ ಮಾಡಿ ಬಾಟೆಲ್ ಗಳನ್ನು ಎಸೆದಿರುವುದನ್ನು ಗಮನಿಸಿದ ಶಾಸಕರು ಉದ್ಯಾನದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕ್ರಮವಹಿಸುವಂತೆ, ಉದ್ಯಾನದಲ್ಲಿ ದೀಪದ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ನ್ಯೂ ಕಾಂತರಾಜ ಅರಸ್ ರಸ್ತೆ ಅಕ್ಷಯ್ ಬಂಡಾರ್ ನಿಂದ ವಿಜಯ ಬ್ಯಾಂಕ್ ವೃತ್ತದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರಾಮದಾಸ್ ಚಾಲನೆ ನೀಡಿದರು. ಸರಸ್ವತಿಪುರಂ ಗ್ರಂಥಾಲಯದ ಹಿಂಭಾಗವಿರುವ ಉದ್ಯಾನವನ ಅಭಿವೃದ್ಧಿ ಆಗದೆ ಇರುವುದನ್ನು ಗಮನಿಸಿ ಉದ್ಯಾನವನವನ್ನು ಮಕ್ಕಳು ಆಟವಾಡಲು, ವಾಕಿಂಗ್ ಮಾಡಲು, ಜಿಮ್ ಸಲಕರಣೆಗಳು, ಯೋಗ ಮಾಡಲು ಯೋಗ ಕೇಂದ್ರ ನಿರ್ಮಿಸಲು ಮತ್ತು ಇದಕ್ಕೆ ಶಾಸಕರ ನಿಧಿಯಿಂದ ಹಣವನ್ನು ಸಹ ನೀಡಲು ಶಾಸಕರು ತಿಳಿಸಿದರು. (ಕೆ.ಎಸ್, ಎಂ.ಎನ್)

Leave a Reply

comments

Related Articles

error: