
ಮೈಸೂರು
ಕೆ.ಆರ್.ಆಸ್ಪತ್ರೆಯ ಹಾಸ್ಟೇಲ್ ಗೆ ವಿ.ಎಸ್. ಉಗ್ರಪ್ಪ ಭೇಟಿ : ಅಕ್ಕಪಕ್ಕ ಅಶುಚಿತ್ವ ವೀಕ್ಷಿಸಿ ಅಧಿಕಾರಿಗಳ ತರಾಟೆ
ಮೈಸೂರು,ಜು.31:- ಅತ್ಯಾಚಾರ ಪ್ರಕರಣಗಳ ತಡೆ ತಜ್ಞರ ಸಮಿತಿಯ ಮಾಜಿ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಮೈಸೂರಿನ ಕೆ.ಆರ್.ಆಸ್ಪತ್ರೆಯ ಹಾಸ್ಟೇಲ್ ಗೆ ಭೇಟಿ ನೀಡಿದರು.
ಕೆ.ಆರ್. ಆಸ್ಪತ್ರೆ ಶುಶ್ರೂಷಕಿಯರ ಹಾಸ್ಟೆಲ್ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಮೋರಿಯಿಂದ ಹೊರ ಬಂದ ಕೆಟ್ಟ ವಾಸನೆಯನ್ನು ಸಹಿಸಲಾರದೇ ಮೂಗು ಮುಚ್ಚಿಕೊಂಡು ವೀಕ್ಷಿಸಿದರು. ನಿಮ್ಮ ಮನೆಯ ಅಕ್ಕ ಪಕ್ಕ ಮೋರಿಗಳನ್ನು ಹೀಗೆ ಇಟ್ಟುಕೊಂಡಿದ್ದೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಾಸ್ಟೆಲ್ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದ ಅವರು ವಿದ್ಯಾರ್ಥಿಗಳಿಂದ ಘಟನೆಯ ವಿವರಣೆ ಕೇಳಿದರು. ವಿದ್ಯಾರ್ಥಿಗಳು ನಡೆದ ಘಟನೆಯನ್ನು ಎಳೆ ಎಳೆಯಾಗಿ ವಿವರಿಸಿದರು. ನಿಮ್ಮ ಸಮಸ್ಯೆಗಳನ್ನು ಶಾಸಕರ ಭವನಕ್ಕೆ ಪತ್ರ ಬರೆದು ತಿಳಿಸಲಾಗುವುದು. ನಾನು ಸದನದಲ್ಲಿ ಸಮಸ್ಯೆಗಳನ್ನು ಚರ್ಚೆ ಮಾಡುತ್ತೇನೆ ಎಂದರು.
ಮೈಸೂರಿನ ಕೆ.ಆರ್.ಆಸ್ಪತ್ರೆಯ ಹಾಸ್ಟೆಲ್ ಗೆ ಭೇಟಿ ನೀಡಬೇಕು. ಇಲ್ಲಿನ ಸಮಸ್ಯೆಯನ್ನು ಆಲಿಸಬೇಕೆಂದು ಮಾಧ್ಯಮಗಳಿಂದ ಹಾಗೂ ಇತರರಿಂದ ಒತ್ತಡ ಬಂದಿತ್ತು. ಈ ಹಿನ್ನೆಲೆಯಲ್ಲಿ ಮೈಸೂರಿನ ಕೆ.ಆರ್.ಆಸ್ಪತ್ರೆಯ ಹಾಸ್ಟೆಲ್ ಗೆ ಭೇಟಿ ನೀಡಿದ್ದೇನೆ. ಈ ವಿದ್ಯಾರ್ಥಿಗಳ ಹಾಸ್ಟೆಲ್ ನ ಸಮಸ್ಯೆ ಹೇಳ ತೀರದಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಲ್ಲಿನ ಆಡಳಿತ ಮಂಡಳಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹಾಸ್ಟೆಲ್ ನ ಪಕ್ಕದ ಮೋರಿಯಲ್ಲಿ ವಾಸನೆ ಬರ್ತಿದೆ. ವಾಸನೆಯಿಂದಾಗಿ ನನಗೆ ಒಂದು ನಿಮಿಷವೂ ನಿಲ್ಲಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ವಿದ್ಯಾರ್ಥಿಗಳು ದಿನದ 24 ಗಂಟೆ ಹೇಗೆ ಜೀವನ ನಡೆಸುತ್ತಿದ್ದಾರೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಆದರೂ ಇಲ್ಲಿನ ಜಿಲ್ಲಾಧಿಕಾರಿ,ಪಾಲಿಕೆಯ ಕಮೀಷನರ್,ಆಡಳಿತ ಮಂಡಳಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಮುಂಬರುವ ಸದನದಲ್ಲಿ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಚರ್ಚಿಸುತ್ತೇನೆ ಎಂದರು.
ಪ್ರತ್ಯೇಕ ರಾಜ್ಯ ವಿಚಾರ ಕ್ಕೆ ಪ್ರತಿಕ್ರಿಯಿಸಿ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಪ್ರತ್ಯೇಕ ರಾಜ್ಯದ ಧ್ವನಿ ಎತ್ತಿದ್ದಾರೆ. ರಾಜ್ಯ ವಿಭಜನೆ ಯಾವುದೇ ಕಾರಣಕ್ಕೂ ಆಗಬಾರದು. ರಾಜಕಾರಣಿಗಳ ಕುಮ್ಮಕಿನಿಂದ ಈ ರೀತಿ ನಡೆಯುತ್ತಿದೆ. ಯಾರು ಈ ಪ್ರತ್ಯೇಕ ವಿಚಾರವನ್ನು ಧ್ವನಿ ಎತ್ತುವಂತೆ ಮಾಡಿದ್ದಾರೋ ಅವರಿಗೆ ರಾಜ್ಯದ ಜನರೇ ಬುದ್ದಿ ಕಲಿಸುತ್ತಾರೆ. ಬಿಜೆಪಿಯವರು ಮಹದಾಯಿ ಹೋರಾಟದಲ್ಲಿ ಯಾಕೆ ಹಿಂದೆ ಸರಿಯುತ್ತಿದ್ದಾರೆಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲ ರಾಜಕಾರಣಿಗಳು ಅಖಂಡ ಕರ್ನಾಟಕ ಉಳಿಸಲು ಮುಂದಾಗಬೇಕೇ ಹೊರತು ರಾಜ್ಯವನ್ನು ಒಡೆಯುವ ಕೆಲಸ ಮಾಡಬಾರದು ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)