
ಪ್ರಮುಖ ಸುದ್ದಿ
ವಿ.ವಿ, ಕಾಲೇಜುಗಳಲ್ಲಿ ಖಾಯಂ ಬೋಧಕ ಹುದ್ದೆಗಳ ಭರ್ತಿಗೆ ಸಂಸದ ಆರ್. ಧ್ರುವನಾರಾಯಣ ಒತ್ತಾಯ
ದೇಶ(ನವದೆಹಲಿ)ಜು. 31: – ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಖಾಯಂ ಆಧಾರದ ಮೇಲೆ ಭರ್ತಿ ಮಾಡುವ ಮೂಲಕ ಹೆಚ್ಚು ಅಂತರದಲ್ಲಿರುವ ವಿದ್ಯಾರ್ಥಿ-ಬೋಧಕ ರಾಷ್ಟ್ರೀಯ ಅನುಪಾತ ಪ್ರಮಾಣವನ್ನು ತಗ್ಗಿಸುವಂತೆ ಲೋಕಸಭಾ ಸದಸ್ಯರಾದ ಅರ್. ಧ್ರುವನಾರಾಯಣ ಸರ್ಕಾರವನ್ನು ಒತ್ತಾಯಿಸಿದರು.
ಸಂಸತ್ತಿನ ಶೂನ್ಯವೇಳೆಯಲ್ಲಿಂದು ಧ್ರುವನಾರಾಯಣ ಅವರು ಈ ವಿಷಯ ಪ್ರಸ್ತಾಪಿಸಿದರು. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಖಿಲ ಭಾರತ ಸಮೀಕ್ಷೆಯು ಉನ್ನತ ಶಿಕ್ಷಣದಲ್ಲಿ ತೊಡಗಿರುವ ಬೋಧಕರ ಸಂಖ್ಯೆ ಇಳಿಮುಖವಾಗಿರುವುದನ್ನು ಬೆಳಕಿಗೆ ತಂದಿದೆ. 2015-16ರಲ್ಲಿ ಇದ್ದ 15.2 ಲಕ್ಷ ಖಾಯಂ ಬೋಧಕರ ಸಂಖ್ಯೆ 13.7 ಲಕ್ಷಕ್ಕೆ ಇಳಿದಿದೆ.ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಶೇ. 35ರಷ್ಟಕ್ಕಿಂತಲೂ ಹೆಚ್ಚು ಬೋಧಕ ಹುದ್ದೆಗಳು ಇನ್ನೂ ಖಾಲಿಯಿವೆ. ತಾತ್ಕಾಲಿಕ ಬೋಧಕರು ಹಾಗೂ ಅತಿಥಿ ಬೋಧಕರು ಸೇರಿದ್ದರೂ ಸಹ ಇನ್ನೂ ಶೇ. 19ರಷ್ಟು ಹುದ್ದೆಗಳು ಖಾಲಿ ಇವೆ ಎಂದು ಧ್ರುವನಾರಾಯಣ ಗಮನ ಸೆಳೆದರು.
ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿ ಹಾಗೂ ಬೋಧಕರ ಅನುಪಾತ ಪ್ರಮಾಣ ಹೆಚ್ಚು ಅಂತರದಲ್ಲಿದ್ದು, ಅತೀ ಹೆಚ್ಚು ಅಂದರೆ 30ರಷ್ಟು ಕಂಡುಬಂದಿದೆ. ವಿದ್ಯಾರ್ಥಿಗೆ ಬೋಧಕ ಅನುಪಾತ ಪ್ರಮಾಣವನ್ನು ವಿಶ್ವದ ಸರಾಸರಿಗೆ ನೋಡಿದಾಗ 2015ರಲ್ಲಿ 23.4:1ರಷ್ಟು ಇತ್ತು. ಅಮೇರಿಕಾದಲ್ಲಿ ಇದು 14:1, ಚೀನಾದಲ್ಲಿ 16.3:1, ಬ್ರೆಜಿಲ್ ನಲ್ಲಿ 20.9:1, ರಷ್ಯಾದಲ್ಲಿ 19.8:1 ಕ್ಕಿಂತಲೂ ಕಡಿಮೆ ಇದೆ.
ವಿದ್ಯಾರ್ಥಿಗೆ ಅನುಗುಣವಾಗಿ ಬೋಧಕ ಅನುಪಾತ ಪ್ರಮಾಣ ಹೆಚ್ಚು ಅಂತರವಿದ್ದಲ್ಲಿ ಬೋಧಕರು ವೈಯಕ್ತಿಕವಾಗಿ ವಿದ್ಯಾರ್ಥಿಗಳ ಮೇಲೆ ಕೇಂದ್ರಿಕರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಶೈಕ್ಷಣಿಕ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಧ್ರುವನಾರಾಯಣ ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)