ಕರ್ನಾಟಕ

“ಸುಧಾರಿತ ತಳಿಗಳ ಬಳಕೆಯಿಂದ ಕೃಷಿಯ ಬೆಳವಣಿಗೆ ಸಾಧ್ಯ”

ಹಾಸನ (ಆ.1): ದೇಶಿಯ ತಳಿಗಳು ಕಡಿಮೆ ಇಳುವರಿ ನೀಡಿದರೂ, ಸುಧಾರಿತ ಹಾಗೂ ಹೈಬ್ರಿಡ್ ತಳಿಗಳಿಗೆ ಹೋಲಿಸಿದರೆ ಅಧಿಕ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಎಂದು ಅನುವಂಶೀಯ ಹಾಗೂ ತಳಿ ಅಭಿವೃದ್ಧಿ ವಿಭಾಗದ ಪ್ರಾಧ್ಯಾಪಕರಾದ ಕಣವಿ ಎಮ್.ಎಸ್.ಪಿ. ಅವರು ಹೇಳಿದರು.

ಕೃಷಿ ಮಹಾವಿದ್ಯಾಲಯ ಹಾಸನದ ಅಂತಿಮ ಬಿ.ಎಸ್.ಸಿ. ಕೃಷಿ ವಿದ್ಯಾರ್ಥಿಗಳು ಹಾಸನ ತಾಲ್ಲೂಕಿನ ಡಣಾಯಕನಹಳ್ಳಿಯಲ್ಲಿ ನಡೆಯುತ್ತಿರುವ ” ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ”ದ ಅಂಗವಾಗಿ “ಸುಧಾರಿತ ತಳಿಗಳು ಮತ್ತು ರೈತರ ಹಕ್ಕಿನ ಕಾನೂನಿನ ಮಹತ್ವ” ವಿಷಯವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿಯಲ್ಲಿ ದೇಶಿಯ, ಸುಧಾರಿತ ಹಾಗೂ ಹೈಬ್ರೀಡ್ ತಳಿಗಳು ಬಳಕೆಯಲ್ಲಿವೆ. ರೈತರು ತಾವೇ ಬೆಳೆದು ಅಭಿವೃದ್ಧಿಪಡಿಸಿದ ತಳಿಗಳನ್ನು ದೇಶಿಯ ತಳಿಗಳನ್ನುತಾರೆ. ದೇಶಿಯ ತಳಿಗಳ ಸಂವರ್ಧನ ಕ್ರಿಯೆಯಿಂದ ಸುಧಾರಿತ ತಳಿಗಳ ಉತ್ಪಾದನೆ ಸಾಧ್ಯ. ಈ ತಳಿಗಳು ಹೆಚ್ಚಿನ ಇಳುವರಿಯನ್ನು ನೀಡುತ್ತದೆ. ಎರಡು ಉತ್ತಮ ತಳಿಗಳ ನಡುವೆ ಸಂಕರಣ ಕ್ರಿಯೆಯನ್ನು ನಡೆಸಿ ಹೈಬ್ರಿಡ್ ತಳಿಗಳನ್ನು ತಯಾರಿಸಬಹುದು. ಇವುಗಳು ಸುಧಾರಿತ ತಳಿಗಳಿಗಿಂತಲೂ ಹೆಚ್ಚು ಇಳುವರಿ ನೀಡುತ್ತದೆ ಆದರೆ ಅದಕ್ಕೆ ಸರಿಯಾದ ಫಲವತ್ತಾದ ಮಣ್ಣು ,ನೀರಿನ ಸೌಲಭ್ಯ, ಪೋಷಕಾಂಶಗಳ ಪೂರೈಕೆ, ಕಡಿಮೆ ಹವಮಾನ ವೈಪರೀತ್ಯ, ಬೆಳೆಯ ಸಂರಕ್ಷಣಾ ಕ್ರಮಗಳು ಅತಿ ಮುಖ್ಯ ಎಂದು ತಿಳಿಸಿದರು.

ರಾಗಿಯಲ್ಲಿ ಎಮ್.ಆರ್- 1 ಹಾಗೂ ಎಮ್.ಆರ್- 6 ತಳಿಗಳು ಮುಂಗಾರಿನಲ್ಲಿ ಬೆಳೆಯುವುದು ಸೂಕ್ತ. ಇವುಗಳು ದೀರ್ಘಾವಧಿ ತಳಿಗಳಾಗಿದ್ದು, ಎಕರೆಗೆ 16-18 ಕ್ವಿಂಟಲ್ ಇಳುವರಿ ಪಡೆಯಬಹುದು.ಇಂಡಾಫ್-7 ಹಾಗೂ 9, ಹಿಂಗಾರಿನ ತಳಿಗಳಾಗಿದ್ದು ಪ್ರತಿ ಎಕರೆಗೆ 12-14 ಕ್ವಿಂಟಲ್ ಇಳುವರಿಯನ್ನು ನೀಡುತ್ತದೆ. ರಾಗಿಯಲ್ಲಿ ಹೊಸ ತಳಿಯಾದ ಎಮ್.ಎಲ್ 365, ವಿ.ಎಲ್-352 ಮಧ್ಯಮಾವಧಿ ತಳಿಯಾಗಿದ್ದು ಎಕರೆಗೆ 12-14 ಕ್ವಿಂಟಲ್ ಇಳುವರಿಯನ್ನು ನೀಡುತ್ತದೆ ಎಂದರು.

ಭತ್ತದ ಧೀರ್ಘಾವದಿ ತಳಿಯಾದ ಬಿ.ಆರ್-2655 ಬೆಂಕಿ ರೋಗಕ್ಕೆ ನಿರೋಧ ಶಕ್ತಿ ಹೊಂದಿದ್ದು ಪ್ರತಿ ಎಕರೆಗೆ 24-26 ಕ್ವಿಂಟಲ್ ಇಳುವರಿಯನ್ನು ನೀಡುತ್ತದೆ ಹಾಗೂ ಮಧ್ಯಮಾವಧಿ, ಸಣ್ಣ ಬತ್ತದ ತಳಿಯಾದ ಜೆ.ಜಿ.ಎಲ್-1798 ಪ್ರತಿ ಎಕರೆಗೆ 20-22 ಕ್ವಿಂಟಲ್ ಇಳುವರಿಯನ್ನು ನೀಡುತ್ತದೆ ಹೇಳಿದರು.

ಆಲೂಗಡ್ಡೆಯ ತಳಿಗಳಾದ ಕುಫ್ರಿ ಬಾದಶಹ, ಕೊನೆಯ ಹಂತದ ಅಂಗಮಾರಿ ರೋಗಕ್ಕೆ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು, ಪ್ರತಿ ಎಕರೆಗೆ 10-12 ಟನ್ ಇಳುವರಿಯನ್ನು ನೀಡುತ್ತದೆ. ಪೆಪ್ಸಿಕೋ-ಇದು ಅಲ್ಪಾವಧಿಯ ತಳಿಯಾಗಿದ್ದು ಕೊನೆಯ ಹಂತದ ಅಂಗಮಾರಿ ರೋಗಕ್ಕೆ ಅತಿವೇಗವಾಗಿ ತುತ್ತಾಗುತ್ತದೆ. ಹಾಗೆಯೇ ಕುಫ್ರಿ ಸುವರ್ಣ ದಕ್ಷಿಣ ಭಾರತಕ್ಕೆ ಉತ್ತಮ ತಳಿಯಾಗಿದ್ದು, ಇದು ಕೊನೆಯ ಹಂತದ ಅಂಗಮಾರಿ ರೋಗಕ್ಕೆ ಹಾಗೂ ನಂಜು ರೋಗಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಪ್ರತಿ ಎಕರೆಗೆ 10-12 ಟನ್ ಇಳುವರಿಯನ್ನು ನೀಡುತ್ತದೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರವು ರೈತರ ಹಿತಾಸಕ್ತಿಯನ್ನು ಕಾಪಾಡಲು 2001ರಲ್ಲಿ ರೈತರ ಹಕ್ಕುಗಳ ಕಾಯ್ದೆಯನ್ನು ಜಾರಿಗೊಳಿಸಿತು. ಈ ಕಾಯ್ದೆಯ ಪ್ರಕಾರ ಉತ್ತಮ ತಳಿಗಳ ಬೀಜವನ್ನು ಪಡೆಯುವುದು ಪ್ರತಿಯೊಬ್ಬ ರೈತನ ಹಕ್ಕು. ಈ ತಳಿಗಳ ಬೀಜವನ್ನು ಒದಗಿಸುವುದು ಜಿಲ್ಲಾಡಳಿತದ ಕರ್ತವ್ಯ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯ ಶಿಬಿರಾರ್ಥಿಗಳು ಹಾಗೂ ಊರಿನ ರೈತರು ಭಾಗವಹಿಸಿದ್ದರು. (ಎನ್.ಬಿ)

Leave a Reply

comments

Related Articles

error: