ದೇಶ

ಗೂಗಲ್ ಡೂಡಲ್ ನಿಂದ `ಟ್ರ್ಯಾಜಿಡಿ ಕ್ವೀನ್’ ಗೆ ನಮನ

ನವದೆಹಲಿ,ಆ.1-`ಟ್ರ್ಯಾಜಿಡಿ ಕ್ವೀನ್’ ಎಂದೇ ಪ್ರಖ್ಯಾತಿಗಳಿಸಿದ್ದ ನಟಿ ಮೀನಾ ಕುಮಾರಿ ಅವರ 85ನೇ ಜನ್ಮದಿನದ ಹಿನ್ನಲೆಯಲ್ಲಿ `ಗೂಗಲ್ ಡೂಡಲ್’ ಅವರಿಗೆ ನಮನ ಸಲ್ಲಿಸಿದೆ.

ಮೀನಾ ಕುಮಾರಿ ಬಾಲ ಕಲಾವಿದೆಯಾಗಿ 6ನೇ ವರ್ಷಕ್ಕೆ ಬೆಳ್ಳಿಪರದೆಗೆ ಅಡಿಯಿಟ್ಟರು. ಅವರ ಮೊದಲ ಚಿತ್ರ ವಿಜಯ್ ಭಟ್ ನಿರ್ದೇಶನ ಮತ್ತು ನಿರ್ಮಾಣದ ‘ದಿ ಲೆದರ್ ಫೇಸ್’.

ಸಾಹಿಬ್ ಬೀಬಿ ಔರ್ ಗುಲಾಂ (1962), ಪಾಕೀಝಾ, ಬೈಜೂ ಬಾರ್ವಾ, ಯಹುದಿ, ಬಹು ಬೇಗಂ ಚಿತ್ರಗಳಲ್ಲಿನ ಮೀನಾ ಕುಮಾರಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಒಟ್ಟು 30 ವರ್ಷಗಳ ವೃತ್ತಿಬದುಕಿನಲ್ಲಿ 90ಕ್ಕೂ ಹೆಚ್ಚು ಚಿತ್ರಗಳಲ್ಲಿ ಮೀನಾ ಕುಮಾರಿ ನಟಿಸಿದ್ದಾರೆ. ಪ್ರೀತಿ ಮತ್ತು ಒಂಟಿತನದ ಪಾತ್ರಗಳನ್ನು ತೆರೆ ಮೇಲೆ ಹೆಚ್ಚು ಆವಿಷ್ಕರಿಸಿದ್ದಾರೆ. ಆಜಾದ್, ಮಿಸ್ ಮಾರಿ, ಶರಾತ್, ಕೋಹಿನೂರ್ ಚಿತ್ರಗಳಲ್ಲಿ ಕಾಮಿಕ್ ಪಾತ್ರಗಳನ್ನು ಪೋಷಿಸಿದ್ದಾರೆ.

ಮೀನಾ ಕುಮಾರಿ ಕೇವಲ ಪ್ರತಿಭಾನ್ವಿತ ತಾರೆಯಷ್ಟೇ ಆಗಿರಲಿಲ್ಲ. ಅವರು ಕವಯಿತ್ರಿಯೂ ಆಗಿದ್ದರು. ನಾಝ್ ಎಂಬ ಕಾವ್ಯನಾಮದಿಂದ ಕವನಗಳನ್ನು ರಚಿಸುತ್ತಿದ್ದರು. ‘ತನ್‍ಹ ಚಾಂದ್’ ಕವನ ಸಂಕಲನ ನಿಧನದ ಬಳಿಕ ಪ್ರಕಟವಾಯಿತು. ಖ್ಯಾತ ಬರಹಗಾರ ಗುಲ್ಜಾರ್ ಈ ಕವನ ಸಂಕಲನವನ್ನು ಸಂಗ್ರಹಿಸಿ ಹೊರತಂದಿದ್ದಾರೆ.

ಒಂದೇ ವರ್ಷದಲ್ಲಿ ಮೂರು ಬಾರಿ ಫಿಲಂಫೇರ್ ‘ಅತ್ಯುತ್ತಮ ನಟಿ’ ವಿಭಾಗದಲ್ಲಿ ನಾಮನಿರ್ದೇಶನಗೊಂಡಿರುವ ಏಕೈಕ ತಾರೆ ಮೀನಾ ಕುಮಾರಿ. 1963ರಲ್ಲಿ ಸಾಹಿಬ್ ಬೀಬಿ ಔರ್ ಗುಲಾಮ್, ಮೇನ್ ಚುಪ್ ರಹೋಂಗಿ ಮತ್ತು ಆರ್ತಿ ಚಿತ್ರಗಳ ಅಭಿನಯಕ್ಕಾಗಿ ನಾಮಿನೇಟ್ ಆಗಿದ್ದರು. ಯಕೃತ್ತಿನ ವೈಫಲ್ಯದ ಕಾರಣ ತನ್ನ 38ನೇ ವರ್ಷಕ್ಕೆ ಮೀನಾ ಕುಮಾರಿ ನಿಧನರಾದರು.

1933 ರಲ್ಲಿ ಆ.1 ರಂದು ಪರ್ಷಿಯಾದ ಆಲಿ ಭಕ್ಷ್ ಮತ್ತು ರಂಗಭೂಮಿ ಕಲಾವಿದೆ ಇಕ್ಬಾಲ್ ಬೇಗಂ ದಂಪತಿಗಳ ಮೂರನೇ ಮಗಳಾಗಿ ಮೀನಾ ಕುಮಾರಿ ಜನಿಸಿದರು. ಅವರ ಮೂಲ ಹೆಸರು ಮಹಜಾಬೀನ್ ಬಾನು. ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಮೀನಾ ಕುಮಾರಿಯಾದರು. (ಎಂ.ಎನ್)

Leave a Reply

comments

Related Articles

error: