
ಮೈಸೂರು
ರಸ್ತೆ ಬದಿ ವ್ಯಾಪಾರಿಗಳು ಸಂಘಟಿತರಾಗಬೇಕು : ಬಿ.ಆರ್. ಉಮಾಕಾಂತ
ರಸ್ತೆಬದಿ ವ್ಯಾಪಾರಿಗಳು ಸಂಘಟಿತರಾದಾಗ ಅವರಿಗೆ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಸವಲತ್ತು ನೀಡುತ್ತದೆ ಎಂದು ವಾಣಿಜ್ಯ ತೆರಿಗೆ ಅಧಿಕಾರಿ ಬಿ.ಆರ್. ಉಮಾಕಾಂತ ತಿಳಿಸಿದರು.
ಮೈಸೂರಿನ ರೋಟರಿ ಸಭಾಂಗಣದಲ್ಲಿ ವಿಶ್ವಋಷಿ ವಾಲ್ಮೀಕಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಫುಟ್`ಪಾತ್ ವ್ಯಾಪಾರಿಗಳ ಸಮಸ್ಯೆಗಳ ಕುರಿತು ಏರ್ಪಡಿಸಲಾದ ವಿಚಾರ ಸಂಕಿರಣವನ್ನು ಬಿ.ಆರ್. ಉಮಾಕಾಂತ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ರಸ್ತೆ ಬದಿ ವ್ಯಾಪಾರಿಗಳು ಎಂದು ಕರೆಸಿಕೊಳ್ಳುವುದು ಸರಿಯಲ್ಲ. ಸಣ್ಣ ವ್ಯಾಪಾರಸ್ಥರಿಂದ ಆರಂಭವಾಗಿ ಅಂಬಾನಿವರೆಗೂ ವ್ಯಾಪಾರಸ್ಥರೇ. ಅತಿ ಸಣ್ಣ ಎಂದ ಮಾತ್ರಕ್ಕೆ ಯಾರೂ ಕೀಳರಿಮೆ ಬೆಳೆಸಿಕೊಳ್ಳಬಾರದು ಎಂದರು. ರಸ್ತೆ ಬದಿ ವ್ಯಾಪಾರಸ್ತರಲ್ಲಿ ಮುಖ್ಯವಾಗಿ ಒಗ್ಗಟ್ಟು ಇರಬೇಕು. ರಸ್ತೆಬದಿ ವ್ಯಾಪಾರಿಗಳು ಸಂಘಟಿತರಾದಾಗ ಅವರಿಗೆ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಸವಲತ್ತನ್ನು ನೀಡುತ್ತದೆ ಎಂದು ತಿಳಿಸಿದರು.
ಈಗ ಎಲ್ಲ ಕಡೆಯೂ ನಗದು ರಹಿತ ವ್ಯಾಪಾರಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಮೊಬೈಲ್ ಅಥವಾ ಸ್ವೈಪಿಂಗ್ ಯಂತ್ರದ ಮೂಲಕ ವಹಿವಾಟು ನಡೆಸಬಹುದು. ಆದರೆ ಮೊಬೈಲ್ ಮತ್ತು ಸ್ವೈಪಿಂಗ್ ಯಂತ್ರವನ್ನು ಬೇರೆಯವರಿಗೆ ನೀಡಬೇಡಿ ಎಂದು ಕಿವಿಮಾತು ಹೇಳಿದರು.
ವಾಣಿಜ್ಯ ತೆರಿಗೆ ಕುರಿತು ಯಾವುದೇ ಸಮಸ್ಯೆಯಿದ್ದರೂ ಅವರಿಗೆ ಉಚಿತ ಸಲಹೆ ನೀಡಲು ನಾನು ಸಿದ್ಧನಿದ್ದು, ನನ್ನನ್ನು ಸಂಪರ್ಕಿಸಬಹುದು ಎಂದರು.
ಈ ಸಂದರ್ಭ ಬನ್ನೂರು ಕುಮಾರ್, ಬ್ಯಾತನಹಳ್ಳಿ ನಾಗರಾಜು, ರಾಜುನಾಯಕ, ವೇದಾಂತ ಕಡಕೊಳ ಮತ್ತಿತರರು ಉಪಸ್ಥಿತರಿದ್ದರು.