
ಮೈಸೂರು
ಖಾಸಗಿ ಬಸ್ ಪಲ್ಟಿ: 20ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ 20ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ಕೊಳ್ಳೇಗಾಲದಿಂದ ತಲಕಾಡಿಗೆ ತೆರಳುತ್ತಿದ್ದ ಸಿದ್ದೇಶ್ವರ ಬಸ್ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ಅವಘಡ ನಡೆದಿದೆ.
ಬಸ್ ತಲಕಾಡಿಗೆ ತೆರಳುತ್ತಿದ್ದಾಗ ಎದುರಿನಿಂದ ಬೈಕೊಂದು ವೇಗವಾಗಿ ಬರುತ್ತಿತ್ತು ಎನ್ನಲಾಗಿದೆ. ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಲು ಬಸ್ ಚಾಲಕ ಬಸ್ ಅನ್ನು ಪಕ್ಕಕ್ಕೆ ತೆಗೆದುಕೊಂಡಿದ್ದ ಎಂದು ತಿಳಿದು ಬಂದಿದೆ. ಆದರೆ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಪಕ್ಕದಲ್ಲಿ ಉರುಳಿ ಬಿದ್ದಿದೆ. ಇದರಿಂದ ಬಸ್`ನಲ್ಲಿದ್ದ ಪ್ರಯಾಣಿಕರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.