ಪ್ರಮುಖ ಸುದ್ದಿಮೈಸೂರು

ಮೂರನೇ ಆಷಾಢ ಶುಕ್ರವಾರ : ಕಂಗೊಳಿಸುತ್ತಿದೆ ದೇವಾಲಯ ; ಚಿನ್ನದ ಪಲ್ಲಕ್ಕಿ ಉತ್ಸವ ನೋಡುವ ಕಾತರದಲ್ಲಿದೆ ಭಕ್ತ ಸಮೂಹ

ಮೈಸೂರು,ಆ.3:- ಮೂರನೇ ಆಶಾಢ ಶುಕ್ರವಾರ ಹಾಗೂ ವರ್ಧಂತಿ ಹಿನ್ನಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನಡೆಯುತ್ತಿದೆ.

ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮುಂಜಾನೆಯಿಂದಲೇ ವಿಶೇಷ ಪೂಜೆ ಸಲ್ಲಿಸಲಾಗುತ್ತಿದ್ದು,ವಿವಿಧ ಬಗೆಯ ಹೂಗಳಿಂದ ನಾಡ ಅಧಿದೇವತೆ ಕಂಗೊಳಿಸುತ್ತಿದ್ದಾಳೆ. ಬೆಂಗಳೂರಿನ ಎಸ್ ಎಫ್ ಎಸ್ ಸತ್ಯನಾರಾಯಣ ಫ್ಲವರ್ ಡೆಕೋರೇಟರ್ ವತಿಯಿಂದ ಹೂವಿನ ಅಲಂಕಾರ ಮಾಡಲಾಗಿದ್ದು, ದೇವಾಲಯ ಬಣ್ಣ ಬಣ್ಣದ ಹೂವಿನಿಂದ ಕಂಗೊಳಿಸುತ್ತಿದೆ.ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು,ಬೆಟ್ಟದಲ್ಲಿ ಸುಗಮ ಸಂಚಾರಕ್ಕೆ ಭಕ್ತಾದಿಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನಕ್ಕೆ ಬಂದಂತಹ ಭಕ್ತಾದಿಗಳಿಗೆ ಸೇವಾ ಸಂಸ್ಥೆಗಳಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಯಾವುದೇ  ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ತಾಯಿಗೆ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ಮುಂಜಾನೆಯಿಂದಲೇ ಆರಂಭಗೊಂಡಿದ್ದು, ಮೂರನೇ ಆಶಾಢ ಶುಕ್ರವಾರದ ಜೊತೆಗೆ ವರ್ಧಂತಿ ಒಟ್ಟಿಗೆ ಬಂದಿರುವುದು ವಿಶೇಷವಾಗಿದೆ. 9:30 ಕ್ಕೆ ಮಹಾಮಂಗಳಾರತಿ ,10:30 ಕ್ಕೆ ಚಿನ್ನದ ಪಲ್ಲಕ್ಕಿ ಉತ್ಸವ ನಡೆಯಲಿದೆ. ಚಿನ್ನದ ಪಲ್ಲಕ್ಕಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಸಾವಿರಾರು ಭಕ್ತರು ಕಾದು ಕುಳಿತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: