ಪ್ರಮುಖ ಸುದ್ದಿಮೈಸೂರು

ಬಂಡೀಪುರದಲ್ಲಿ ರಾತ್ರಿವೇಳೆ ವಾಹನ ಸಂಚಾರಕ್ಕೆ ವಿರೋಧವಿದೆ : ಸಚಿವ ಆರ್.ಶಂಕರ್

ಮೈಸೂರು,ಆ.3;-  ಬಂಡೀಪುರದಲ್ಲಿ ರಾತ್ರಿವೇಳೆ ವಾಹನ ಸಂಚಾರಕ್ಕೆ ವಿರೋಧವಿದೆ ಎಂದು ಅರಣ್ಯ ಸಚಿವ ಆರ್.ಶಂಕರ್ ತಿಳಿಸಿದರು.

ಮೈಸೂರಿನ ಅತಿಥಿ ಗೃಹದಲ್ಲಿಂದು ಸಸಿನೆಟ್ಟು ನೀರುಣಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಬಂಡೀಪುರದಲ್ಲಿ ರಾತ್ರಿ ವೇಳೆ  ವಾಹನ ಸಂಚಾರಕ್ಕೆ ನನ್ನ  ಆಕ್ಷೇಪಣೆ ಇದೆ. ಈಗಾಗಲೇ ಸಾರ್ವಜನಿಕರು, ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಕೇರಳದವರಿಗೆ ಮಣಿದು ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ರಾತ್ರಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಪ್ರಾಣಿಗಳಿಗೆ, ಪರಿಸರಕ್ಕೆ ತೊಂದರೆಯಾಗಲಿದೆ. ರಾತ್ರಿ ವೇಳೆ ವಾಹನಗಳು ಚಲಿಸುವಾಗ ಪ್ರಾಣಿಗಳಿಗೆ ತೊಂದರೆ ಆಗುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಧಾರ ತಗೆದುಕೊಳ್ಳಬೇಕು. ಈ ವಿಷಯವನ್ನು ನಾನು ಮುಖ್ಯಮಂತ್ರಿಗಳ ಜೊತೆ ಚರ್ಚೆ  ಮಾಡುತ್ತೇನೆ ಎಂದರು.

ಅರಣ್ಯ ಸಚಿವನಾದ ಬಳಿಕ ನಾನು ಎಲ್ಲಾ‌ ಕಡೆ ಹೋಗುತ್ತಿದ್ದೇನೆ. ಗೋಮಾಳ, ಸರ್ಕಾರಿ ಜಾಗಗಳಲ್ಲಿ ಸಸಿ ನೆಡಿಸುವ ಕಾರ್ಯ ಮಾಡಲಾಗುತ್ತಿದೆ. ಸುಮಾರು 10 ಕೋಟಿ ವೆಚ್ಚದಲ್ಲಿ ಸೀಡ್ ಬಾಲ್ ಗಳನ್ನು  ಎಲ್ಲಾ‌ ಕಡೆ ಹಾಕಲಾಗುತ್ತಿದೆ‌. ರಸ್ತೆ ಅಗಲೀಕರಣದ ವೇಳೆ ನಾಶವಾಗಿರುವ ಮರಗಳ ಜಾಗದಲ್ಲಿ ಸಸಿ ನೆಡಿಸಲಾಗುತ್ತಿದೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪರಿಸರವನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಪರಿಸರ ಅಭಿವೃದ್ಧಿ ಮಾಡುವುದೇ ನನ್ನ ಗುರಿ ಎಂದರು.

ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿ ಈಗಾಗಲೇ ಅರಣ್ಯ ಇಲಾಖೆಗೆ ಸಿಬ್ಬಂದಿ ನೇಮಕಾತಿ ನಡೆದಿದೆ. ಸುಮಾರು 3500 ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: