ಮೈಸೂರು

ಬಾಯಿಯ ಸ್ವಚ್ಛತೆ-ಆರೋಗ್ಯದ ಬಗ್ಗೆ ಜೆಎಸ್‍ಎಸ್‍ ದಂತ ವೈದ್ಯರಿಂದ ತಿಳಿವಳಿಕೆ

ಸುತ್ತೂರು ಮಠದ ಡಾ|| ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ ಪ್ರಯುಕ್ತ ಮೈಸೂರು ತಾಲ್ಲೂಕಿನಾದ್ಯಂತ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಾಥಮಿಕ ಬಾಯಿಯ ಆರೋಗ್ಯ ಮತ್ತು ರೋಗ ತಡೆಗಟ್ಟುವ ಬಗ್ಗೆ ಉಪನ್ಯಾಸವನ್ನು ಈಚೆಗೆ ಹಮ್ಮಿಕೊಳ್ಳಲಾಗಿತ್ತು.

ಕಳೆದ ತಿಂಗಳು ಜೂನ್ 7 ರಿಂದ ಆರಂಭವಾದ ಕಾರ್ಯಕ್ರಮವು ಹದಿನಾರು ದಿನಗಳ ಕಾಲ ಜರುಗಿತು. ಈ ಸಂದರ್ಭದಲ್ಲಿ ನುರಿತ ವೈದ್ಯರುಗಳಿಂದ ಮಕ್ಕಳಿಗೆ ಹಲ್ಲು ಉಜ್ಜುವ ಸರಿಯಾದ ಕ್ರಮ, ಬಾಯಿಯ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಯಿತು. ಜೆ.ಎಸ್.ಎಸ್ ದಂತ ವೈದ್ಯಕೀಯ ಆಸ್ಪತ್ರೆಯಿಂದ ಹಲ್ಲು ಉಜ್ಜುವ ವಿಧಾನದ ರೂಪರೇಷೆಗಳನ್ನು ಸಿದ್ಧಪಡಿಸಿದ್ದು ಇದನ್ನು ಹಂತ ಹಂತವಾಗಿ ಅಳವಡಿಸಿಕೊಂಡಲ್ಲಿ ಪರಿಣಾಮಕಾರಿಯಾದ ಫಲಿತಾಂಶ ಬರುವುದು ಎಂದು ತಿಳಿಸಿದ ವೈದ್ಯರು, ಈ ಹಿನ್ನಲೆಯಲ್ಲಿ ಸರಿಯಾದ ಬ್ರಷ್ ಮತ್ತು ಪೇಸ್ಟ್ ಉಪಯೋಗದ ಬಗ್ಗೆಯೂ ತಿಳಿಸಿಕೊಟ್ಟರು, “ಹಲ್ಲು ಹುಳುಕು ಮತ್ತು ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ಹಾಗೂ ಸರಿಯಾದ ಆಹಾರ ಕ್ರಮದ ಬಗ್ಗೆ ವಾರಕ್ಕೊಮ್ಮೆ ಮಕ್ಕಳಿಗೆ ಶಿಕ್ಷಕರು ಅರಿವು ಮೂಡಿಸಬೇಕು’’ ಎಂದು ಕರೆ ನೀಡಿದರು.

ಕಾರ್ಯಕ್ರಮದಡಿ ತಾಲ್ಲೂಕಿನ ಒಟ್ಟು 176 ಹಳ್ಳಿಗಳ ಶಾಲೆಗಳಿಗೆ ಜೆ.ಎಸ್.ಎಸ್. ದಂತ ವೈದ್ಯಕೀಯ ವಿಭಾಗದ ಡಾ|| ನಂದಲಾಲ್ ಬಿ, ಡಾ|| ರಾಘವೇಂದ್ರ ಶಾನ್ ಭೋಗ್ ಹಾಗೂ ಮಹೇಂದ್ರ ಅವರನ್ನೊಳಗೊಂಡ ತಜ್ಞರ ತಂಡವು ಸಂಚರಿಸಿ ದಂತ ಆರೈಕೆಯ ಬಗ್ಗೆ ಅರಿವು ಮೂಡಿಸಿತು.

Leave a Reply

comments

Related Articles

error: