ಕರ್ನಾಟಕಪ್ರಮುಖ ಸುದ್ದಿ

ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಯಡಿಯೂರಪ್ಪಗೇ ಪೂರ್ಣಾಧಿಕಾರಿ ನೀಡಿದ ಹೈಕಮಾಂಡ್

ಬೆಂಗಳೂರು (ಆ.3): ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಪೂರ್ಣ ತಯಾರಿ ನಡೆಸಿರುವ ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರ ನೀಡಲು ನಿರ್ಧರಿಸಿದೆ ಎನ್ನಲಾಗಿದೆ.

ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸ ಬಯಸುವ ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ಉಸ್ತುವಾರಿ ಮುಂತಾದ ವಿಚಾರಗಳಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಪೂರ್ಣ ಸಂತಂತ್ರ್ಯ ನೀಡಲಾಗಿದೆ. ಆದ್ದರಿಂದ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಭೇಟಿ ರದ್ದಾಗಿದೆ ಎಂದು ತಿಳಿದುಬಂದಿದೆ.

ಜುಲೈ ಅಂತ್ಯದಲ್ಲಿ ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸಬೇಕಿತ್ತು. ರಾಜ್ಯದ ನಾಯಕರ ಜೊತೆ ಲೋಕಸಭೆ ಚುನಾವಣೆ 2019ರ ಬಗ್ಗೆ ಚರ್ಚೆ ನಡೆಸಬೇಕಿತ್ತು. ಆದರೆ, ಲೋಕಸಭೆ ಕಲಾಪದ ಹಿನ್ನಲೆಯಲ್ಲಿ ಅಮಿತ್ ಶಾ ಭೇಟಿ ಮುಂದೂಡಿಕೆಯಾಗಿತ್ತು. ಆಗಸ್ಟ್‌ನಲ್ಲಿ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಸದ್ಯದ ಮಾಹಿತಿ ಪ್ರಕಾರ ಅಮಿತ್ ಶಾ ರಾಜ್ಯ ಭೇಟಿ ಮುಂದಕ್ಕೆ ಹೋಗಿದೆ. ಯಡಿಯೂರಪ್ಪ ಅವರಿಗೆ ಚುನಾವಣೆ ತಯಾರಿಯ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ. ಲೋಕಸಭೆ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಸುವುದಾಗಿ ಎರಡೂ ಪಕ್ಷಗಳು ಘೋಷಣೆ ಮಾಡಿವೆ. ಆದ್ದರಿಂದ, ಬಿಜೆಪಿ ಈ ಬಾರಿಯ ಚುನಾವಣೆಯನ್ನು ಪತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದೆ. ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20+ ಸ್ಥಾನಗಳನ್ನು ಗೆಲ್ಲಬೇಕು ಎಂದು ಅಮಿತ್ ಶಾ ಈಗಾಗಲೇ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಆಗಮಿಸಿ ಪ್ರಚಾರವನ್ನು ನಡೆಸಿ ಹೋಗಲಿದ್ದಾರೆ. ಯಡಿಯೂರಪ್ಪ ಅವರ ಜೊತೆ ಹೈಕಮಾಂಡ್ ನಿರಂತರ ಸಂಪರ್ಕದಲ್ಲಿದ್ದು ನಿರ್ದೇಶನ ನೀಡಲಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿಕೊಂಡಿತ್ತು. ಆದರೆ, 104 ಸ್ಥಾನಗಳನ್ನುಗಳಿಸಲು ಮಾತ್ರ ಸಾಧ್ಯವಾಯಿತು. ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ನಾಯಕರನ್ನು ಕಡೆಗಣಿಸಲಾಯಿತು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಪೂರ್ಣಧಿಕಾರ ನೀಡಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಸ್ಥಳೀಯ ನಾಯಕರ ತಂತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೇಂದ್ರ ನಾಯಕರ ತಂಡ ಚುನಾವಣೆ ಘೋಷಣೆಯಾದ ಬಳಿಕ ರಾಜ್ಯಕ್ಕೆ ಬಂದು ಕೆಲಸದಲ್ಲಿ ತೊಡಗಿಸಿಕೊಳ್ಳಲಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 17, ಕಾಂಗ್ರೆಸ್‌ 9 ಮತ್ತು ಜೆಡಿಎಸ್‌ 2 ಸ್ಥಾನಗಳಲ್ಲಿ ಜಯಗಳಿಸಿದ್ದವು. ಆದರೆ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. ಲೋಕಸಭೆ ಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ. ಆದ್ದರಿಂದ ಬಿಜೆಪಿ ಈ ಬಾರಿ ಚುನಾವಣೆಗೆ ಸರ್ವತಂತ್ರ ರಣತಂತ್ರ ರೂಪಿಸಲು ಯಡಿಯೂರಪ್ಪನವರೇ ಸೂಕ್ತ ಎಂದು ಅವರಿಗೆ ಪೂರ್ಣಾಧಿಕಾರ ನೀಡಿದೆ ಎಂದು ಹೇಳಲಾಗಿದೆ. (ಎನ್.ಬಿ)

Leave a Reply

comments

Related Articles

error: