
ಮೈಸೂರು
ಮೈಸೂರ್ ಬಾಯ್ಸ್ ‘ಹೊಗೆ’ ವಿಡಿಯೋ ಸಾಂಗ್ ಬಿಡುಗಡೆಗೆ ಸಿದ್ಧ
ಮಾದಕ ವಸ್ತುಗಳ ದುಷ್ಪರಿಣಾಮ ಬಿಂಬಿಸುವ ನೈಜ ಘಟನೆಯಾಧಾರಿತ “ಹೊಗೆ” ವಿಡಿಯೋ ಹಾಡನ್ನು “ಮೈಸೂರು ಬಾಯ್ಸ್”ತಂಡವು ನಿರ್ಮಾಣ ಮಾಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ ಎಂದು ನಿರ್ದೇಶಕ ಮನೋಹರ್ ಗೌಡ ತಿಳಿಸಿದರು.
ಅವರು ಸೋಮವಾರ ಪತ್ರಕರ್ತರ ಭವನದಲ್ಲಿ ಮಾತನಾಡಿ, ಮೈಸೂರು ಬಾಯ್ಸ್ ತಂಡದ ಮೊದಲ ಪ್ರಯತ್ನ “ಹೊಗೆ” ವಿಡಿಯೋ ಹಾಡನ್ನು ಡಿ.23 ರಂದು ಯೂಟ್ಯೂಬ್ನಲ್ಲಿ ಬಿಡುಗಡೆಗೊಳಿಸಲಿದ್ದೇವೆ. ಕೇವಲ ಮೈಸೂರಿನವರೇ ಸೇರಿಕೊಂಡು ನಿರ್ಮಿಸಿರುವ ಹಾಡಿನಲ್ಲಿ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಹಾಗೂ ಸೆಂಚುರಿ ಗೌಡ ಇವರುಗಳು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡಿನ ಚಿತ್ರೀಕರಣವನ್ನು ಮೈಸೂರಿನಲ್ಲಿಯೇ ಅಕ್ಟೋಬರ್ ತಿಂಗಳಲ್ಲಿ ಸಂಜೆ 6 ರಿಂದ ಬೆಳಗ್ಗೆ 6 ರ ವರೆಗೆ ನಡೆಸಲಾಗಿದ್ದು ಉತ್ತಮವಾಗಿ ಮೂಡಿ ಬಂದಿದೆ. ಸ್ಥಳೀಯರೇ ಆದ 7 ಜನ ಕಲಾವಿದರು, 4 ಮಂದಿ ಅಘೋರಿಗಳು, ಶಿವನಪಾತ್ರದಲ್ಲಿ ಸತೀಶ್ ಮಂಡ್ಯ ಅಭಿನಯಿಸಿದ್ದಾರೆ. ಉತ್ತಮ ಪರಿಣಾಮಕಾರಿ ದೃಶ್ಯಾವಳಿಗಳಿಗಾಗಿಯೇ ರಾತ್ರಿಯಲ್ಲಿಯೇ ಚಿತ್ರೀಕರಣ ನಡೆಸಲಾಗಿದ್ದು, ಮೈಸೂರಿನ ಅಕ್ಯೂರ್ಕೀ ಸ್ಟುಡಿಯೋದಲ್ಲಿ ಧ್ವನಿ ಮುದ್ರಣಗೊಂಡಿದೆ ಎಂದು ತಿಳಿಸಿದರು.
ಎಲೆಮರೆಯ ಕಾಯಂತಿರುವ ಪ್ರತಿಭಾವಂತ ಕಲಾವಿದರಿಗೆ ಪ್ರೋತ್ಸಾಹ ದೊರೆತರೆ ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕವೇ ಮೈಸೂರಿನ ಕಡೆ ನೋಡುವಂತೆ ಮಾಡಲಾಗುವುದು ಎಂದು ಮನೋಹರ್ ಗೌಡ ಅವರು ಆತ್ಮವಿಶ್ವಾಸದ ನುಡಿಗಳನ್ನಾಡಿದರು.
ಟ್ರೇಲರ್ಗೆ ಸೆಲಿಬ್ರಿಟಿಗಳಾದ ಕುರಿ ಪ್ರತಾಪ್, ಪವನ್, ನೀತೂ, ಸಿಂಧು ಲೋಕನಾಥ್, ಅದಿತಿ ರಾವ್, ನಿರ್ದೇಶಕ ಮಹೇಶ್, ಆರ್.ಜೆ. ರೋಹಿತ್, ಸುನಾಮಿ ಕಿಟ್ಟಿಯವರ ಪ್ರತಿಕ್ರಿಯೆಯ ದೃಶ್ಯಾವಳಿಗಳನ್ನು ಈ ಸಂದರ್ಭದಲ್ಲಿ ಬಿತ್ತರಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಗಾಯಕ ಪ್ರಶಾಂತ್, ಸಂಗೀತ ನಿರ್ದೇಶಕ ರಘುನಂದನ್ ಎಸ್.ರಾವ್, ಧ್ವನಿಮುದ್ರಣ ಕೇಂದ್ರದ ರವಿಶಂಕರ್, ಸಹ ನಿರ್ದೇಶಕರಾದ ಪವನ್ ಕುಮಾರ್, ಅಕ್ಷಯ್, ಸಂದೇಶ, ನಿರ್ಮಾಪಕ ಸತೀಶ್ ಮಂಡ್ಯ ಇವರು ಉಪಸ್ಥಿತರಿದ್ದರು.