ಮೈಸೂರು

ಜಿಲ್ಲಾಪಂಚಾಯತ್ ಪ್ರಗತಿ ಪರಿಶೀಲನಾ ಸಭೆ: ಅಧಿಕಾರಿಗಳಿಗೆ ತರಾಟೆ

ಜಿಲ್ಲಾ ಪಂಚಾಯತ್ ಅಧಿಕಾರಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಏನೆಲ್ಲ ಕೆಲಸ ಮಾಡಿದ್ದೀರಿ ಎನ್ನುವ ಸಂಪೂರ್ಣ ವಿವರಣೆಯನ್ನು ಪ್ರತಿದಿನ ತನಗೆ ಸಂದೇಶದ ಮೂಲಕ ರವಾನಿಸಿ ಎಂದು ಮೈಸೂರು ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಅಧಿಕಾರಿಗಳಿಗೆ ಆದೇಶ ನೀಡಿದರು.

ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಯಾವ ಇಲಾಖೆಯಲ್ಲಿಯೂ ಸರಿಯಾಗಿ ಕೆಲಸಗಳು ನಡೆಯುತ್ತಿಲ್ಲ ಎನ್ನುವ ದೂರುಗಳು ಬರುತ್ತಿದ್ದು, ಅಧಿಕಾರಿಗಳು ಏನೆಲ್ಲಾ ಕೆಲಸವನ್ನು ಮಾಡಿದ್ದೀರಿ ಎನ್ನುವ ಸಂದೇಶವನ್ನು ಇವತ್ತಿನಿಂದಲೇ ನನಗೆ ಸಂದೇಶದ ಮೂಲಕ ರವಾನಿಸಿ ಎಂದು ಕಟ್ಟುನಿಟ್ಟಾಗಿ ಆದೇಶಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾತ್ ಉಪಾಧ್ಯಕ್ಷ ಬೀರಿ ಹುಂಡಿ ಬಸವಣ್ಣ ಮಾತನಾಡಿ, ನಂಜನಗೂಡು ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಸ್ವ-ಉದ್ಯೋಗ ಕೈಗೊಳ್ಳುವ ಕುರಿತಂತೆ ಮಧ್ಯವರ್ತಿಗಳನ್ನು ಅವಲಂಬಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದ್ದು ಅಧಿಕಾರಿಗಳು ಏನು ಮಾಡುತ್ತೀದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ರೈತರು ಬರಗಾಲದ ಪರಿಸ್ಥಿತಿ ಎದುರಿಸುತ್ತಿದ್ದು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ. ಕಂದಾಯ ಇಲಾಖೆಯಲ್ಲಿಯೂ ಯಾವುದೇ ಕೆಲಸಕಾರ್ಯಗಳು ನಡೆಯುತ್ತಿಲ್ಲ. ಅಧಿಕಾರಿಗಳನ್ನು ವಿಚಾರಿಸಿದರೆ ಬರೇ ಸುಳ್ಳು ಉತ್ತರವನ್ನೇ ನೀಡುತ್ತಾರೆ ಎಂದು ಕಿಡಿ ಕಾರಿದರು.

13 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಎಂದಿದ್ದಾರೆ. ಆದರೆ ಒಂದೇ ಹಳ್ಳಿಗೆ ನೀರು ಬಂದಿದೆ ಎನ್ನುವ ಮಾಹಿತಿ ಲಭಿಸಿದೆ. ಕುಡಿಯುವ ನೀರಿನ ಯೋಜನೆ ಫೈಲ್ ಎಲ್ಲಿ ಎಂದು ಸಂಬಂಧಪಟ್ಟವರನ್ನು ವಿಚಾರಿಸಿದಾಗ ಇನ್ನೂ ಫೈಲ್ ನನ್ನ ಕೈ ತಲುಪಿಲ್ಲ ಎಂಬ ಹಾರಿಕೆಯ ಉತ್ತರಕ್ಕೆ ಬೀರಿಹುಂಡಿ ಬಸವಣ್ಣ ಗರಂ ಆದರು. ಸೂಕ್ತ ವರದಿ ನೀಡಿ. ಗೊಂದಲಗಳನ್ನು ನಿವಾರಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಆರೋಗ್ಯ ಇಲಾಖೆಯಲ್ಲಿ 40 ರಷ್ಟು ಹುದ್ದೆ ಖಾಲಿ ಇದ್ದು ಅದರಲ್ಲಿ 250 ಮಂದಿಯನ್ನು ಶೀಘ್ರದಲ್ಲೇ ಭರ್ತಿ ಮಾಡಿಕೊಳ್ಳುತ್ತೇವೆ ಎಂದು ಈ ಸಂದರ್ಭ ಸಭೆಗೆ ಮಾಹಿತಿ ನೀಡಿದರು.

ಸಭೆಯು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: