
ಪ್ರಮುಖ ಸುದ್ದಿಮೈಸೂರು
ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸಲು ಬ್ಯಾಂಕ್ ಅಧಿಕಾರಿಗಳೇ ಶಾಮೀಲಾಗಿರುವುದು ವಿಪರ್ಯಾಸ: ಪ್ರತಾಪ್ ಸಿಂಹ
500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ ಜಿಲ್ಲೆಯಲ್ಲಿ ತಲೆದೋರಿರುವ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಸಂಸದ ಪ್ರತಾಪ್ಸಿಂಹ ಹಾಗೂ ಜಿಲ್ಲಾಧಿಕಾರಿ ಡಿ.ರಂದೀಪ್ ಸೋಮವಾರ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಬ್ಯಾಂಕ್ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ನ.8ರಿಂದ ಜಿಲ್ಲೆಯಲ್ಲಿ ನಿರ್ಮಾಣವಾಗಿದ್ದ ಹಲವು ಸಮಸ್ಯೆಗಳು ಅನಾವರಣಗೊಂಡವು. ಈ ವೇಳೆ ಮಾತನಾಡಿದ ಸಂಸದ ಪ್ರತಾಪ್ಸಿಂಹ, 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡುವ ವಿಷಯವನ್ನು ಗೌಪ್ಯವಾಗಿಟ್ಟು, 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ಯಾವ ಕಾರಣಕ್ಕೆ ತರಲಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಸರ್ಕಾರ ಚಾಪೆ ಕೆಳಗೆ ತೂರಿದರೆ, ಕಾಳ ಧನಿಕರು ರಂಗೋಲಿ ಕೆಳಗೆ ತೂರುತ್ತಾರೆ. ಸಹಕಾರಿ ಹಾಗೂ ಕೋ-ಆಪರೇಟಿವ್ ಬ್ಯಾಂಕ್ಗಳು ಬಹುತೇಕ ರಾಜಕಾರಣಿಗಳ ವಶದಲ್ಲಿರುವುದರಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಲಾಗುತ್ತಿದೆ ಎಂಬ ಆರೋಪ ಇದೆ. ವಿಪರ್ಯಾಸ ಎಂದರೆ ಇದರಲ್ಲಿ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿರುವುದು ಬೇಸರದ ಸಂಗತಿ ಎಂದರು.
ಎಟಿಎಂಗಳಲ್ಲಿ ಲಕ್ಷ ಲಕ್ಷ ಹಣ ಡ್ರಾ ಮಾಡುವ ಅವಕಾಶಗಳಿದ್ದಾಗಲೂ ತೊಂದರೆಯಾಗಿರಲಿಲ್ಲ. ಆದರೆ ದಿನಕ್ಕೆ ಕೇವಲ 2 ಸಾವಿರ ರೂ. ಡ್ರಾ ಮಾಡುವ ಮಿತಿ ಇದ್ದರೂ ಸಮಸ್ಯೆ ತಲೆದೋರುತ್ತಿದೆ. ನಗರದ ಬಹುತೇಕ ಎಟಿಎಂಗಳು ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೆ ಬ್ಯಾಂಕ್ನಲ್ಲಿ ಹಣ ಡ್ರಾ ಮಾಡೋಣವೆಂದರೆ ಕ್ಯಾಶ್ ಇಲ್ಲ ಎಂದು ಕಡಿಮೆ ಹಣ ನೀಡುತ್ತಾರೆ. ನೋಟು ಅಮಾನ್ಯ ಮಾಡಿದ ಬಳಿಕ ಯಾವ ಯಾವ ಬ್ಯಾಂಕ್ನಲ್ಲಿ ಎಷ್ಟು ಹೊಸ ಖಾತೆಗಳನ್ನು ತೆರಯಲಾಗಿದೆ, ಅವುಗಳಲ್ಲಿ ನಕಲಿ ಖಾತೆ ಎಷ್ಟು, ಡೆಪಾಸಿಟ್ ಆಗಿರುವ ಹಣ ಎಷ್ಟು ಹಾಗೂ ನ.8 ರಿಂದ ಇಲ್ಲಿಯವರೆಗೆ 40 ದಿನಗಳೇ ಕಳೆದಿದ್ದರೂ ಸಮಸ್ಯೆ ಉಲ್ಬಣವಾಗಲು ಕಾರಣ ಏನು ಎಂದು ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಲೀಡ್ ಬ್ಯಾಂಕ್ನ ಮುಖ್ಯಸ್ಥ ಶಿವಲಿಂಗಯ್ಯ, 500 ಹಾಗೂ 1000 ರೂ. ನೋಟುಗಳ ಅಪಮೌಲ್ಯದ ಬಳಿಕ ಬ್ಯಾಂಕ್ಗಳಿಗೆ ಬೇಡಿಕೆಯಿರುವಷ್ಟು ಹೊಸ ನೋಟುಗಳು ಬರುತ್ತಿಲ್ಲ. ಜಿಲ್ಲೆಯಲ್ಲಿ ಒಟ್ಟು 730 ಎಟಿಎಂಗಳಿದ್ದು, ಎಲ್ಲವೂ ಹೊಸ ನೋಟುಗಳ ಅಳವಡಿಕೆಗೆ ಪರಿವರ್ತನೆಯಾಗಿವೆ. ಕಡಿಮೆ ಎಂದರೂ ದಿನಕ್ಕೆ ಒಂದು ಎಟಿಂಗೆ 10 ಲಕ್ಷ ರೂ. ಹಣ ಹಾಕಬೇಕು. ಎಲ್ಲಾ 730 ಎಟಿಎಂಗಳಿಗೆ ಒಟ್ಟು 73 ಕೋಟಿ ರೂ. ಬೇಕು. ಆದರೆ ಆರ್ಬಿಐನಿಂದ ಇಷ್ಟು ಹಣ ದೊರೆಯುತ್ತಿಲ್ಲ. ಅಲ್ಲದೆ ಒಬ್ಬರೇ ಐದಾರು ಕಾರ್ಡುಗಳನ್ನು ಹೊಂದಿದ್ದು ಹಣ ಹಾಕಿದಾಗ ಡ್ರಾ ಮಾಡುವುದರಿಂದ ಎಲ್ಲರಿಗೂ ದೊರೆಯುತ್ತಿಲ್ಲ. ಅನಾಣ್ಯೀಕರಣಕ್ಕೂ ಮುನ್ನ ಪ್ರತಿದಿನ ಲಕ್ಷಾಂತರ ರೂ. ಡೆಪಾಸಿಟ್ ಆಗುತ್ತಿತ್ತು. ಆದರೀಗ ಡ್ರಾ ಮಾಡುವವರ ಸಂಖ್ಯೆ ಹೆಚ್ಚಾಗಿರುವುದರಿಂದ ನಮ್ಮಲ್ಲಿರುವ ಹಣವನ್ನೇ ನೀಡಬೇಕಿರುವುದು ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ಸಿಂಹ, ನೋಟುಗಳ ಅಪಮೌಲ್ಯ ಮಾಡಿರುವುದೇ ಕಾಳಧನಿಕರನ್ನು ಬಯಲಿಗೆಳೆಯಲು. ಇನ್ನು ಮುಂದೆ ಕೈಯಿಂದ ಕೈಗೆ ನಗದು ವ್ಯವಹಾರ ನಡೆಯುವುದಿಲ್ಲ. ಡಿಜಿಟಲ್ ಬ್ಯಾಂಕಿಂಗ್ಗೆ ಹೆಚ್ಚು ಪ್ರೋತ್ಸಾಹವನ್ನು ಬ್ಯಾಂಕ್ ಅಧಿಕಾರಿಗಳು ನೀಡಬೇಕು. ವರ್ತಕರು, ವ್ಯಾಪಾರಿಗಳು, ಆಟೋ, ಕ್ಯಾಬ್ ಚಾಲಕರು ಮೊಬೈಲ್ ಬ್ಯಾಂಕಿಂಗ್ ಮೂಲಕ ವ್ಯವಹರಿಸಲು ಪ್ರೇರೇಪಿಸಬೇಕು. ಬೇಡಿಕೆ ಇರುವ ಕಡೆ ಸ್ಪರ್ಧಾತ್ಮಕ ದರದಲ್ಲಿ ಹೆಚ್ಚು ಪಿಓಎಸ್ ಮೆಷಿನ್ಗಳನ್ನು ನೀಡಬೇಕು. ಇ-ವ್ಯಾಲೆಟ್ ಬಳಸುವ ಕುರಿತು ಮಾಹಿತಿ ನೀಡಬೇಕು ಎಂದು ಹೇಳಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಿ.ರಂದೀಪ್, ಆರ್ಬಿಐ ಬ್ಯಾಂಕ್ ಅಧಿಕಾರಿಗಳಿಗೆ ಕೆಲ ಸೂಚನೆಗಳನ್ನು ನೀಡಿದ್ದು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೊಸ ಖಾತೆ ತೆರೆಯಲು ಉತ್ತೇಜನ ನೀಡಬೇಕು. ಹೆಚ್ಚು ರುಪೆ ಕಾರ್ಡ್ಗಳನ್ನು ವಿತರಿಸಬೇಕು. ಬ್ಯಾಂಕ್ ಖಾತೆ ತೆರೆಯಲು ಹಾಗೂ ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಕಾರ್ಯಾಗಾರಗಳನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಅಲ್ಲದೆ ನ.8 ರಿಂದ ಡಿ.31 ರ ವರೆಗಿನ ಸಿಸಿ ಟಿವಿ ಫುಟೇಜ್ಗಳನ್ನು ಸಂರಕ್ಷಿಸಿಡಬೇಕು ಎಂದು ನಿರ್ದೇಶನ ನೀಡಿದರಲ್ಲದೇ, ಎಲ್ಲರೂ ಅದರಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಪ್ರತಾಪ್ಸಿಂಹ, ಪ್ರತಿ 5000 ಜನಸಂಖ್ಯೆಗೆ ಒಂದು ಬ್ಯಾಂಕ್, ಎಟಿಎಂ ಇರಬೇಕು ಎಂಬ ನಿಯಮವಿದ್ದು ಪ್ರತಿ ಪಂಚಾಯಿತಿಗೆ ಒಂದರಂತೆ ಬ್ಯಾಂಕ್ ಶಾಖೆ ತೆರೆಯಬೇಕು. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಜಿಲ್ಲೆಯಾದ್ಯಂತ ಏಕಕಾಲಕ್ಕೆ ಕಾರ್ಯಾಗಾರ ಆಯೋಜಿಸಿ ಮಾಹಿತಿ ನೀಡುವ ಕೆಲಸ ಮಾಡಬೇಕಿದೆ. ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು. ರೈತರು ತಾವು ಬೆಳೆದ ಭತ್ತ, ಕಬ್ಬು ಸೇರಿದಂತೆ ಇನ್ನಿತರ ಬೆಳೆಗಳನ್ನು ಮಾರಲು ಬ್ಯಾಂಕ್ ಖಾತೆಯ ಅವಶ್ಯಕತೆ ಇದೆ. ಹಾಗಾಗಿ ಎಲ್ಲಾ ಬ್ಯಾಂಕ್ಗಳನ್ನು ಒಟ್ಟುಗೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಲಿಂಗಯ್ಯ, ಜಿಲ್ಲೆಯಲ್ಲಿ ಒಟ್ಟು 512 ಬ್ಯಾಂಕ್ ಶಾಖೆಗಳಿದ್ದು ರಾಜ್ಯದಲ್ಲಿ ಹೆಚ್ಚು ಶಾಖೆಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಬೆಳಗಾವಿಯ ನಂತರದ ಸ್ಥಾನದಲ್ಲಿ ಮೈಸೂರಿದೆ. ಜಿಲ್ಲೆಯಲ್ಲಿ ಬ್ಯಾಂಕ್ ನೆಟ್ವರ್ಕ್ ಉತ್ತಮವಾಗಿದ್ದು, ಯಾವುದೇ ತೊಂದರೆಯಿಲ್ಲ. 12 ಪಂಚಾಯಿತಿ ವ್ಯಾಪ್ತಿಯಲ್ಲಿ ಬ್ಯಾಂಕ್ ಶಾಖೆ ಆರಂಭಿಸಬೇಕಿದ್ದು, ಈಗಿರುವ ಬ್ಯಾಂಕ್ಗಳಲ್ಲೇ ಸಿಬ್ಬಂದಿಯ ಕೊರತೆಯಿಂದ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲೆಯ ವಿವಿಧ ಬ್ಯಾಂಕ್ಗಳ ಮುಖ್ಯಸ್ಥರು ಭಾಗವಹಿಸಿದ್ದರು.