
ಪ್ರಮುಖ ಸುದ್ದಿಮೈಸೂರು
ರೇಸ್ ಕ್ಲಬ್ ಅವ್ಯವಹಾರ: ಅಧಿಕಾರಿಗಳ ವಿರುದ್ಧ ಸಿಐಡಿ ತನಿಖೆಗೆ ಕರ್ನಾಟಕ ಕನ್ನಡ ವೇದಿಕೆ ಒತ್ತಾಯ
ರೇಸ್ ಕ್ಲಬ್ ಜಾಗದ ಗುತ್ತಿಗೆ ಅವಧಿ ಮುಗಿದಿದ್ದರೂ, ಜಯಚಾಮರಾಜೇಂದ್ರ ಗಾಲ್ಫ್ ಕ್ಲಬ್ಗೆ ಆಧಾರದ ಮೇಲೆ ಅಕ್ರಮವಾಗಿ ಒಳಗುತ್ತಿಗೆ ನೀಡಲಾಗಿದೆ. ಅಮೂಲ್ಯ ಆಸ್ತಿ ದುರುಪಯೋಗವಾಗುತ್ತಿದ್ದು ಸರ್ಕಾರ ತಕ್ಷಣವೇ ರೇಸ್`ಕೋರ್ಸ್ ಜಾಗ ವಶಕ್ಕೆ ಪಡೆಯಬೇಕು ಎಂದು ಕರ್ನಾಟಕ ಕನ್ನಡ ವೇದಿಕೆ ಅಧ್ಯಕ್ಷ ಸುರೇಶ್ ಬಾಬು ಆಗ್ರಹಿಸಿದರು.
ಅವರು ಸೋಮವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 139 ಎಕರೆ 39 ಗುಂಟೆ ಸರ್ಕಾರಿ ಜಾಗದ ರೇಸ್ ಕ್ಲಬ್ ಗುತ್ತಿಗೆಯೂ 2016ರ ಮಾರ್ಚ್ 31ಕ್ಕೆಅವಧಿ ಮುಗಿದಿದ್ದೂ, ಗುತ್ತಿಗೆ ಅಕ್ರಮವಾಗಿ ಮುಂದುರಿಸಲಾಗಿದೆ. ಕರಾರಿನಂತೆ ತೆರಿಗೆ ಕಟ್ಟದೆ ಸುಮಾರು 26 ವರ್ಷಗಳಿಂದಲೂ ಸರ್ಕಾರಕ್ಕೆ ವಂಚಿಸಲಾಗಿದೆ. ಗಾಲ್ಫ್ ಆಟಗಾರರಿಂದಲೂ ಗ್ರೀನ್ ಶುಲ್ಕ ಸಂಗ್ರಹಿಸುತ್ತಿಲ್ಲ. ಪ್ರಭಾವಿಗಳ ರಕ್ಷೆಯಲ್ಲಿ ನಡೆಯುತ್ತಿರುವ ಕ್ಲಬ್ ವಿರುದ್ಧ ಇದುವರೆಗೂ ಕ್ರಮ ಜರುಗಿಸದೆ ಇರುವುದು ಖಂಡನಾರ್ಹವೆಂದರು.
ತೆರಿಗೆ ವಂಚನೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಕಳೆದ ಆಗಸ್ಟ್ 8ರಂದು ಜಿಲ್ಲಾಧಿಕಾರಿಗಳು ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದನ್ನು ಉಲ್ಲೇಖಿಸಿದ್ದರು. ಆದರೆ, ಈಚೆಗೆ ಈ ವಿಷಯ ಸರ್ಕಾರ ಮತ್ತು ರೇಸ್ ಕ್ಲಬ್ ನುಡುವಿನದ್ದಾಗಿದೆ, ಗುತ್ತಿಗೆಗೂ ಜಿಲ್ಲಾಡಳಿತಕ್ಕೂ ಸಂಬಂಧವಿಲ್ಲವೆಂದು ಜಿಲ್ಲಾಧಿಕಾರಿಗಳು ನುಣುಚಿಕೊಂಡಿದ್ದಾರೆ.
ಲಂಚದ ರೂಪದಲ್ಲಿ ಸದಸ್ಯತ್ವ: ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರರಾದ ಶ್ರೀನಿವಾಸ್, ಸತ್ಯನಾರಾಯಣ, ರಾಮಚಂದ್ರ ಮತ್ತು ಸಹಾಯಕ ತಾಂತ್ರಿಕ ಅಭಿಯಂತರ ಸತ್ಯಮೂರ್ತಿಯವರು ಸರ್ಕಾರದ ಆಸ್ತಿಯನ್ನು ರಕ್ಷಣೆ ಮಾಡುವ ಬದಲು ಭ್ರಷ್ಟಾಚಾರವೆಸಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವುಂಟು ಮಾಡಿದ್ದಾರೆ. ಅಲ್ಲದೇ, ರಾಮಚಂದ್ರ ಮತ್ತು ಸತ್ಯಮೂರ್ತಿಗೆ ಹಣದ ರೂಪದಲ್ಲಿ ಕ್ಲಬ್ನ ಸದಸ್ಯತ್ವ ನೀಡಲಾಗಿದ್ದು ಅನುಮಾನಕ್ಕೆ ಪುಷ್ಟಿ ನೀಡಿದೆ. ನವೀಕರಣಕ್ಕೆ ಹಲವಾರು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಟಸ್ಥವಾಗಿರುವ ಸರ್ಕಾರವೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ಕ್ರಮ ಜರುಗಿಸಲು ಮೀನಮೇಷ ಎಣಿಸುತ್ತಿದೆ ಎಂದು ದೂರಿದ್ದಾರೆ.
ಸರ್ಕಾರ ತಟಸ್ಥ: ಸಮಾರು 20ಕ್ಕೂ ಹೆಚ್ಚು ಪ್ರಭಾವಿ ಸಚಿವರು, ಶಾಸಕರು ಕ್ಲಬ್ನ ಸದಸ್ಯತ್ವ ಹೊಂದಿದ್ದು, ಅವರ ವಿರುದ್ಧ ಕ್ರಮ ಜರುಗಿಸದೆ ತಟಸ್ಥವಾಗಿದ್ದಾರೆ. ಸರ್ಕಾರವು ಕಂಡರೂ ಕಾಣದಂತಹ ಜಾಣ ಕುರುಡು ಪ್ರದರ್ಶಿಸುತ್ತಿದ್ದು, ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಭ್ರಷ್ಟಾಚಾರಲ್ಲಿ ಸರ್ಕಾರದ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಶಂಕೆ ಮೂಡಿದೆ. ಇಲಾಖೆ ಅಧಿಕಾರಿಗಳು ತನಿಖೆಗೆ ಸೂಕ್ತ ದಾಖಲೆ ಒದಗಿಸಲು ನಿರ್ಲಕ್ಷ್ಯ ತೋರುತ್ತಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ಎಸಿಪಿಗೆ, ಜಿಲ್ಲಾಧಿಕಾರಿಗಳಿಗೂ ಹಾಗೂ ಲೋಕೋಪಯೋಗಿ ಇಲಾಖೆಯವರಿಗೂ ಮನವಿ ಮಾಡಿದ್ದರೂ ತಾತ್ಸಾರದ ಉತ್ತರ ಲಭಿಸಿದೆ. ಈ ಬಗ್ಗೆ ಪ್ರಧಾನಿ ಮೋದಿಯವರಿಗೂ ಪತ್ರ ಬರೆಯಲಾಗಿದೆ.
ಸಿಐಡಿ ತನಿಖೆ: ಹೋರಾಟವನ್ನು ಹತ್ತಿಕ್ಕಲು ಇಲಾಖಾ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದು ಸೂಕ್ತ ದಾಖಲೆಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಅಧಿಕಾರ ದುರುಪಯೋಗದ ಬಗ್ಗೆ ಸಿಐಡಿ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ತಕ್ಷಣವೇ ಮೈಸೂರು ರೇಸ್ ಕ್ಲಬ್ಗೆ ಬೀಗ ಜಡಿಯಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ಭಾನುಮೋಹನ್, ಕಾರ್ಯದರ್ಶಿ ಸದಾನಂದ, ಮೋಹನ್, ನಾಗೇಶ್, ಸೋಮಶೇಖರ್, ಫಾರೆಸ್ಟ್ ಶಂಕರ್ ಉಪಸ್ಥಿತರಿದ್ದರು.