
ಪ್ರಮುಖ ಸುದ್ದಿ
ಲೋಕಸಭಾ ಚುನಾವಣೆಯಲ್ಲಿ ಗೀತಾ ಸ್ಪರ್ಧೆ ಕುರಿತು ಸಿಎಂ ಜೊತೆ ಚರ್ಚಿಸಿಲ್ಲ : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
ರಾಜ್ಯ(ಬೆಂಗಳೂರು)ಆ.6:- ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ, ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಜೊತೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಸುಮಾರು ಅರ್ಧ ಗಂಟೆಗಳ ಕಾಲ ಶಿವಣ್ಣ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದರು.
ಮೈಸೂರಿನಲ್ಲಿ ದಿ.ಪಾರ್ವತಮ್ಮ ರಾಜ್ ಕುಮಾರ್ ಅವರು ನಡೆಸುತ್ತಿದ್ದ ಶಾಂತಿಧಾಮದ ಅಭಿವೃದ್ಧಿ ಮತ್ತು ಶಾಲೆಯೊಂದನ್ನು ತೆರೆಯುವ ಬಗ್ಗೆ ಶಿವರಾಜ್ ಕುಮಾರ್ ಚರ್ಚೆ ನಡೆಸಿದರು. ಕುಮಾರಸ್ವಾಮಿ ಅವರ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ‘ಲೋಕಸಭಾ ಉಪ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಗೀತಾ ಅವರನ್ನು ಕಣಕ್ಕಿಳಿಸುವ ಕುರಿತು ತೀರ್ಮಾನ ಮಾಡಿಲ್ಲ’. ‘ಗೀತಾ ಇಚ್ಛೆ ಇದ್ದರೆ ಯಾರೂ ತಪ್ಪಿಸಲಾಗುವುದಿಲ್ಲ’ ಎಂದರು. ‘ಶಿವಮೊಗ್ಗದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ’ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದರು. (ಕೆ.ಎಸ್,ಎಸ್.ಎಚ್)