
ಕರ್ನಾಟಕ
ಶಿರ್ವ ಮೂಲದ ನರ್ಸ್ ಸೌದಿಯಲ್ಲಿ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು
ಉಡುಪಿ,ಆ.6-ಉಡುಪಿಯ ಶಿರ್ವ ಮೂಲದ ನರ್ಸ್ ಹೆಝಲ್ ಸೌದಿ ಅರೇಬಿಯಾದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಹೆಝಲ್ ಗೆ ಸೌದಿ ಪ್ರಜೆಯೊಬ್ಬ ಕಿರುಕುಳ ನೀಡುತ್ತಿದ್ದ. ಆತನ ಕಿರುಕುಳ ತಾಳಲಾರದೆ ಹೆಝಲ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ವ್ಯಕ್ತಪಡಿಸಿರುವ ಸೌದಿ ಪೊಲೀಸರು ಕಿರುಕುಳ ನೀಡಿರುವ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.
ಡೆತ್ ನೋಟ್ ನಲ್ಲೂ ಸೌದಿ ಪ್ರಜೆಯ ಕಿರುಕುಳದ ಬಗ್ಗೆ ಉಲ್ಲೇಖ ಮಾಡಿದ್ದ ನರ್ಸ್, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು. ಜು.19 ರಂದು ನಿಗೂಢವಾಗಿ ಸಾವನ್ನಪ್ಪಿದ್ದ ನರ್ಸ್ ಹೆಝಲ್ ಮೃತದೇಹ ಇನ್ನು ತಾಯ್ನಾಡು ತಲುಪಿಲ್ಲ. ಹೆಝಲ್ ಮೃತದೇಹ ಹುಟ್ಟೂರಿಗೆ ತರಲು ಉಡುಪಿ ಜಿಲ್ಲಾಡಳಿತದಿಂದ ನಿರಂತರ ಪ್ರಯತ್ನಗಳು ನಡೆಯುತ್ತಿವೆ.
ಇದೇ ವೇಳೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಝಾ ಅವರು ಕೂಡ ವಿದೇಶಾಂಗ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸಿದ್ದಾರೆ. ಇದೊಂದು ಸಂಶಯಾಸ್ಪದ ಪ್ರಕರಣವಾಗಿರುವುದರಿಂದ ಮತ್ತು ಸೌದಿಯಲ್ಲಿ ಕಠಿಣ ಕಾನೂನು ಇರುವ ಕಾರಣದಿಂದ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಮೃತದೇಹ ಹುಟ್ಟೂರು ಶಿರ್ವಕ್ಕೆ ತಲುಪಲಿದೆ ಎಂದು ತಿಳಿದು ಬಂದಿದೆ. (ಎಂ.ಎನ್)