ಪ್ರಮುಖ ಸುದ್ದಿಮೈಸೂರು

ಸ್ವಾಮಿ ವಿವೇಕಾನಂದರ ಸಾವು ಸಹಜವಲ್ಲ ‘ಕೊಲೆ’ : ಪ್ರೊ.ಕೆ.ಎಸ್.ಭಗವಾನ್

ಸರ್ಕಾರ ಮಟ್ಟದಲ್ಲಿ ಮಹಿಷಾ ದಸರಾ ಆಚರಣೆಗೆ ಒತ್ತಾಯ

ಮೈಸೂರು, ಆ.6 : ಸ್ವಾಮಿ ವಿವೇಕಾನಂದರ ಸಾವು ಸಹಜವಲ್ಲ, ಅವರನ್ನು ಕತ್ತು ಹಿಸುಕಿ ಕೊಲ್ಲಲಾಗಿದ್ದು ಈ ಬಗ್ಗೆ ಸರ್ಕಾರ ಕೂಲಂಕುಷ ತನಿಖೆ ನಡೆಸಬೇಕು ಎಂದು ಪ್ರಗತಿ ಪರ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಮಹಿಷಾ ದಸರಾ ಪ್ರತಿಷ್ಠಾನ ಸಮಿತಿಯು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಬೌದ್ಧ ಧರ್ಮದ ವಿಚಾರ ಧಾರೆಗಳ ಕುರಿತು ಮಾತನಾಡಲಾರಂಭಿಸಿದ್ದರು. ಆ ಬಳಿಕವೇ ಅವರನ್ನು ಕೊಂದಿರುವ ಅನುಮಾನವಿದೆ. ಯುವಕರಾಗಿದ್ದ ಸ್ವಾಮಿ ವಿವೇಕಾನಂದರು ಏಕಾಏಕಿ ಸಹಜ ಸಾವನ್ನಪ್ಪಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.

ಆದೇ ರೀತಿ ಬಸವಣ್ಣ ಅವರನ್ನು ಕೊಲೆ ಮಾಡಲಾಗಿದೆ. ಬಸವಣ್ಣನವರ ವಚನ  ಚಳವಳಿಯನ್ನು ಸಹಿಸದವರು ಅವರನ್ನು ಕೊಂದಿದ್ದಾರೆ.  ಬಸವಣ್ಣನವರು ಕೂಡಲ ಸಂಗಮದ ಕಲ್ಯಾಣದಲ್ಲಿ ಐಕ್ಯರಾದರೆಂಬುದು ಶುದ್ಧ ಸುಳ್ಳು. ಜಾತಿ ವ್ಯವಸ್ಥೆ ವಿರುದ್ಧ ಚಳವಳಿ ಹುಟ್ಟು ಹಾಕಿದವರು ಬಸವಣ್ಣನವರು. ಅಂತಹ ಬಸವಣ್ಣ ಏಕೆ ಐಕ್ಯರಾಗಿ ಸಾಯುತ್ತಾರೆ ಹೇಳಿ  ಕೈಲಾಸ, ಸ್ವರ್ಗ ಎಂಬುದು ಏನೂ ಇಲ್ಲ ಎಂದು ಭಗವಾನ್ ಪ್ರತಿಪಾದಿಸಿದರು..

ರಾಜ್ಯ ಸರ್ಕಾರದಿಂದಲೇ ಮಹಿಷಾ ದಸರಾ :  ಕಳೆದ ನಾಲ್ಕು ವರ್ಷಗಳಿಂದ ಮಹಿಷಾ ದಸರಾ ಪ್ರತಿಷ್ಠಾನ ಸಮಿತಿ ಸ್ವಂತ ಖರ್ಚಿನಿಂದ ಆಚರಿಸಿಕೊಂಡು ಬಂದಿರುವ ಮಹಿಷಾ ದಸರಾವನ್ನು ನಾಡ ಹಬ್ಬ ಚಾಮುಂಡಿ ದಸರಾದಂತೆಯೇ ಮಹಿಷ ದಸರಾವನ್ನು ರಾಜ್ಯ ಸರ್ಕಾರವೇ ಆಚರಿಸಬೇಕು ಎಂದು ಕೋರಿದರು.

ಮುಂದಿನ ಅಕ್ಟೋಬರ್ 7ರಂದು ನಡೆಯುವ ಮಹಿಷಾ ದಸರಾವನ್ನು ಜಂಬೂ ಸವಾರಿ ರೀತಿ ಆನೆಯ ಮೇಲೆ ಮಹಿಷನ ಪ್ರತಿಮೆಯನ್ನು ಕೂರಿಸಿ ಮೆರವಣಿಗೆ ಮಾಡಬೇಕು. ಆ ಮೂಲಕ ಪ್ರಾಚೀನ ಪಕ್ಷಾಚರಣೆಯ ದ್ರಾವಿಡ ಸಂಸ್ಕೃತಿಯನ್ನು ಸರ್ಕಾರ ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದರು.

ಉರಿಲಿಂಗಿ ಪೆದ್ದಿಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ, ಸಮಿತಿ ಅಧ್ಯಕ್ಷ ಶಾಂತರಾಜ್, ಸಾಹಿತಿ ರಾಜು ಕೆ.ಬನ್ನೂರು, ಮಾಜಿ ಮೇಯರ್ ಪುರುಷೋತ್ತಮ್ ಮತ್ತಿತರರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: