ಕರ್ನಾಟಕ

ಆ.11 : ಕಗ್ಗೋಡ್ಲುವಿನಲ್ಲಿ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾ ಕೂಟ

ರಾಜ್ಯ(ಮಡಿಕೇರಿ) ಆ.6 : -ಯುವ ಸಬಲೀಕರಣ ಮತ್ತು ಕೀಡಾ ಇಲಾಖೆ, ನೆಹರು ಯುವ ಕೇಂದ್ರ, ಯೂತ್ ಹಾಸ್ಟಲ್ ಅಸೋಸಿಯೇಷನ್ ಆಫ್ ಇಂಡಿಯಾದ ಮಡಿಕೇರಿ ಘಟಕ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮೂರು ತಾಲೂಕು ಯುವ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾ ಕೂಟ ಮತ್ತು ಆಟೋಟ ಸ್ಪರ್ಧೆಗಳು ಆ.11 ರಂದು ಕಗ್ಗೋಡ್ಲುವಿನಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ ಅವರು, ಕಗ್ಗೋಡ್ಲುವಿನ ದಿ.ಸಿ.ಡಿ. ಬೋಪಯ್ಯ ಅವರ ಗದ್ದೆಯಲ್ಲಿ ನಡೆಯಲಿರುವ 27ನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟ ಹಾಗೂ ಆಟೋಟ ಸ್ಪರ್ಧೆಗಳ ಕುರಿತು ಮಾಹಿತಿ ನೀಡಿದರು. ಪುರುಷರು ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ, ಮುಕ್ತ ಓಟದ ಸ್ಪರ್ಧೆಗಳು, ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್, ಕಿರಿಯ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರಿಗೆ 50 ಮೀಟರ್ ಓಟದ ಸ್ಪರ್ಧೆ, ಹಿರಿಯ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರಿಗೆ 100 ಮೀ., ಪ್ರೌಢಶಾಲಾ ಬಾಲಕ ಬಾಲಕಿಯರಿಗೆ 200 ಮೀ., ಪದವಿ ಪೂರ್ವ ಬಾಲಕ ಬಾಲಕಿಯರಿಗೆ 300 ಮೀ. ಓಟದ ಸ್ಪರ್ಧೆಗಳು ನಡೆಯಲಿದ್ದು, ಪ್ರೌಢಶಾಲಾ ಬಾಲಕ ಬಾಲಕಿಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಲಿದೆ. ಇದರೊಂದಿಗೆ ಸಾರ್ವಜನಿಕ ಪುರುಷರು ಮತ್ತು ಮಹಿಳೆಯರಿಗೆ ಮುಕ್ತ ಓಟದ ಸ್ಪರ್ಧೆ, ಕಗ್ಗೋಡ್ಲು ಗ್ರಾಮಸ್ಥರಿಗೆ ಸಾಂಪ್ರದಾಯಿಕ ನಾಟಿ ಓಟ ಸ್ಪರ್ಧೆಗಳು ಜರುಗಲಿರುವುದಾಗಿ ತಿಳಿಸಿದರು. ಪುರುಷರ ವಾಲಿಬಾಲ್‍ನಲ್ಲಿ 4 ಜನರ ತಂಡ, ಪುರುಷರ ಮತ್ತು ಮಹಿಳೆಯರ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ  ತಲಾ 9 ಜನರು,  ಮಹಿಳೆಯದ ಥ್ರೋಬಾಲ್‍ನಲ್ಲಿ 5 ಜನರ ತಂಡಗಳಿಗೆ ಅವಕಾಶವಿರುವುದಾಗಿ ವಿವರಿಸಿದರು.

ವಾಲಿಬಾಲ್, ಥ್ರೋಬಾಲ್ ಮತ್ತು ಹಗ್ಗಜಗ್ಗಾಟ ತಂಡಗಳು 500 ರೂ. ಮೈದಾನ ಶುಲ್ಕ ಪಾವತಿಸಿ ಆಗಸ್ಟ್10ರ ಅಪರಾಹ್ನ 2 ಗಂಟೆಯ ಒಳಗೆ ತಂಡದ ಭಾಗವಹಿಸುವಿಕೆಯನ್ನು ಖಾತರಿಪಡಿಸಬೇಕು. ಪ್ರೌಢ ಶಾಲಾ ವಿಭಾಗದ ಹಗ್ಗಜಗ್ಗಾಟದಲ್ಲಿ ಭಾಗವಹಿಸುವವರು ತಮ್ಮ ವಿದ್ಯಾಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ತರಬೇಕು ಎಂದು ನುಡಿದರು. ಕ್ರೀಡಾ ತಂಡಗಳ ಪಂದ್ಯಗಳಲ್ಲಿ ವಿಜೇತ ತಂಡಗಳಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನವಾಗಿ  ಆಕರ್ಷಕ ಪಾರಿತೋಷಕ ಮತ್ತು ನಗದು ಬಹುಮಾನ ನೀಡಲಾಗುವುದು ಎಂದರು. ಭಾಗವಹಿಸುವ ತಂಡಗಳು ಮಡಿಕೇರಿ ತಾಲೂಕು ಯುವ ಒಕ್ಕೂಟ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ಅಥವಾ ಮೊಬೈಲ್ ಸಂಖ್ಯೆ-9449952008, 9740404520, 9483835674 ನ್ನು ಸಂಪರ್ಕಿಸಬಹುದೆಂದು ತಿಳಿಸಿದರು. ಉದ್ಘಾಟನೆ- ಕೆಸರು ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಆಗಸ್ಟ್ 11ರ ಪೂರ್ವಾಹ್ನ 10.30 ಗಂಟೆಗೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ. ಮಹೇಶ್ ಉದ್ಘಾಟಿಸಲಿದ್ದಾರೆ. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಬಿ.ಎ. ಹರೀಶ್, ಪ್ರತಾಪ ಸಿಂಹ, ಲೋಕೇಶ್ವರಿ ಗೋಪಾಲ್, ಕುಮುದಾ ರಶ್ಮಿ, ಕೆ.ಕೆ. ಜಯಂತಿ, ಕೆ.ಎಸ್. ಭೀಮಯ್ಯ, ಕಾಂಗೀರ ಸತೀಶ್, ಸಿ.ಬಿ. ದೇವಯ್ಯ ಅವರುಗಳು ಪಾಲ್ಗೊಳ್ಳಲಿದ್ದಾರೆ.

ಸಂಜೆ 5.30 ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಾಕತ್ತೂರು ಗ್ರಾಪಂ ಅಧ್ಯಕ್ಷೆ ಶಾರದಾ ರಾಮಕೃಷ್ಣ ವಹಿಸಿಕೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ, ತಾಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಪಣ್ಣೇಕರ್, ಹಾಕತ್ತೂರು ಗ್ರಾಪಂ ಉಪಾಧ್ಯಕ್ಷ ಪಿ.ಎಸ್. ವಿಷ್ಣು ಕುಮಾರ್, ಸದಸ್ಯರಾದ ಪಿಯೂಷ್ ಪೆರೇರ, ಹೇಮಾವತಿ, ಸಮಾಜ ಸೇವಕ ಸಂಕೇತ್ ಪೂವಯ್ಯ, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಭಾಗವಹಿಸಲಿದ್ದಾರೆ ಎಂದರು.

ಜಿಲ್ಲಾ ಯುವ ಒಕ್ಕೂಟದ ಉಪಾಧ್ಯಕ್ಷ ಪಿ.ಪಿ. ಸುಕುಮಾರ್ ಅವರು ಮಾತನಾಡಿ, ಕೆಸರು ಗದ್ದೆ ಕ್ರೀಡಾ ಕೂಟಕ್ಕೆ ಅಂದಾಜು 2.50-3  ಲಕ್ಷ ವೆಚ್ಚ ತಗುಲಲಿದ್ದು, ಪ್ರಸ್ತುತ ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆ 70 ಸಾವಿರ ರೂ.ಗಳನ್ನು  ನೀಡುತ್ತಿದೆ. ಕನಿಷ್ಠ 1.50 ಲಕ್ಷ ಅನುದಾನವನ್ನಾದರು ಒದಗಹಿಸುವಂತಾಗಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಡಿ. ಹರೀಶ್, ಮಡಿಕೇರಿ ತಾಲೂಕು ಯುವ ಒಕ್ಕೂಟದ ಕಾರ್ಯದರ್ಶಿ ಬಾಳಡಿ ದಿಲೀಪ್ ಕುಮಾರ್, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಬಿ.ಎಂ. ರಾಜಶೇಖರ್, ಮಡಿಕೇರಿ ಘಟಕದ ಕಾರ್ಯದರ್ಶಿ ಸಿ.ಎ. ಅಯ್ಯಣ್ಣ ಹಾಜರಿದ್ದರು.     (ಕೆಸಿಐ,ಎಸ್.ಎಚ್)

Leave a Reply

comments

Related Articles

error: