
ಮೈಸೂರು
ರಾಜ್ಯದಲ್ಲೇ ಪ್ರಥಮ ಪ್ರಯೋಗವಾಗಿ ತೆರೆದ ಪುಸ್ತಕ ಪರೀಕ್ಷೆ
ಮೈಸೂರು,ಆ.7:- ರಾಮಕೃಷ್ಣ ನಗರದಲ್ಲಿರುವ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ನೃಪತುಂಗ ಕನ್ನಡ ಶಾಲೆಯಲ್ಲಿಂದು ರಾಜ್ಯದಲ್ಲೇ ಪ್ರಥಮ ಪ್ರಯೋಗವಾಗಿ ತೆರೆದ ಪುಸ್ತಕ ಪರೀಕ್ಷೆಯನ್ನು ನಡೆಸಲಾಯಿತು.
ಶಿಕ್ಷಣ ಸಚಿವರು ಪ್ರಸ್ತಾಪಿಸಿರುವ ತೆರೆದ ಪುಸ್ತಕ ಪರೀಕ್ಷೆಯ ಸಾಧಕ ಬಾಧಕಗಳನ್ನು ಪ್ರತ್ಯಕ್ಷವಾಗಿ ಅರಿಯಲು ತೆರೆದ ಪುಸ್ತಕ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, 5ರಿಂದ 10ನೇ ತರಗತಿಯಯವರೆಗೆ ಒಂದೊಂದು ತರಗತಿಗೆ ಒಂದೊಂದು ವಿಷಯದಂತೆ ಗಣಿತವೊಂದನ್ನು ಹೊರತುಪಡಿಸಿ ಕನ್ನಡ, ಇಂಗ್ಲಿಷ್, ಹಿಂದಿ, ವಿಜ್ಞಾನ ಮತ್ತು ಸಮಾಜವಿಜ್ಞಾನ ವಿಷಯಗಳಲ್ಲಿ ತೆರೆದ ಪುಸ್ತಕ ಪರೀಕ್ಷೆ ನಡೆಸಲಾಗುತ್ತದೆ. ಸಾಂಪ್ರದಾಯಿಕ ಪರೀಕ್ಷೆಯ ಉತ್ತರ ಪತ್ರಿಕೆಗಳೊಂದಿಗೆ ತಾಳೆ ನೋಡಿ ಒಂದು ತೌಲನಿಕ ವರದಿಯನ್ನು ಸಿದ್ಧಪಡಿಸಲು ಉದ್ದೇಶಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸ.ರ.ಸುದರ್ಶನ ತಿಳಿಸಿದ್ದಾರೆ. ಇಂದು ನಡೆದ ಪರೀಕ್ಷೆಯಲ್ಲಿ ಸುಮಾರು 150ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. (ಹೆಚ್.ಎನ್,ಎಸ್.ಎಚ್)