ಪ್ರಮುಖ ಸುದ್ದಿಮೈಸೂರು

ಎಳೆಯ ಮಕ್ಕಳಲ್ಲಿ ಸಂಸ್ಕೃತಿಯ ಬೀಜ ಬಿತ್ತುವ ಕೆಲಸವಾಗಬೇಕು : ಕವಿ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ

ನಾ.ರಾಮಾನುಜ ರಚಿತ ನಗೆ ನಾಟಕ ‘ ಗ್ರೀನ್ ರೂಂ ಗಲಾಟೆ ಕೃತಿ ಲೋಕಾರ್ಪಣೆ

ಮೈಸೂರು,ಆ.7:- ಪುಸ್ತಕ ಮಸ್ತಕಕ್ಕೆ ಬರದೇ ಸಾರ್ಥಕತೆ ಪಡೆಯಲಾರದು. ಅದಕ್ಕಾಗಿ ಎಳೆಯ ಮಕ್ಕಳಲ್ಲಿ ಸಂಸ್ಕೃತಿಯ ಬೀಜ ಬಿತ್ತುವ ಕೆಲಸವಾಗಬೇಕು ಎಂದು ಖ್ಯಾತ ಕವಿ, ಲೇಖಕ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ತಿಳಿಸಿದರು.

ವಿಜಯನಗರದ ಮೊದಲನೇ ಹಂತದಲ್ಲಿರುವ ಭಾರತೀಯ ವಿದ್ಯಾಭವನ ಭವನ್ಸ್ ಪ್ರಿಯಂವದಾ ಬಿರ್ಲಾ ಇನ್ಸಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ವತಿಯಿಂದ ಸಂಸ್ಥೆಯ ಸಭಾಗಣದಲ್ಲಿಂದು ನಾ.ರಾಮಾನುಜ ರಚಿತ ನಗೆ ನಾಟಕ ‘ ಗ್ರೀನ್ ರೂಂ ಗಲಾಟೆ ಕೃತಿ ಲೋಕಾರ್ಪಣೆಗೊಳಿಸಿ, ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ರಾಮಾನುಜ ಅವರು ನಿಜವಾಗಿಯೂ ಸೊಗಸಾಗಿ ನಾಟಕಗಳನ್ನು ಬರೆಯುವವರು. ಇದಕ್ಕೂ ಹೆಚ್ಚಿನ ಹಾಸ್ಯ ನಾಟಕ ಬರೆಯುವ ಸಾಮರ್ಥ್ಯ ಅವರಲ್ಲಿದೆ. ಅವರು ಬದುಕನ್ನು ಕುರಿತು ಬರೆದರೂ ಅದು ಅದ್ಭುತ ಕೃತಿಯಾಗಲಿದೆ. ಕನ್ನಡ ಸಂಸ್ಕೃತಿಯನ್ನು ಕಟ್ಟಿಕೊಡುವ ಅದ್ಭುತ ಕಲಾಪ್ರಯೋಗ ಅದು. ಪಟ್ಟು ಹಿಡಿದು ಇಂಥ ಕೃತಿ ಬರೆಸಿ ಎಂದರು. ವೆಂಕಣಯ್ಯ ಅವರ ಹೆಸರಿನಲ್ಲಿ ಗ್ರಂಥಮಾಲೆ ತೆರೆದು ಅವರ ನೆನಪನ್ನು ಚಿರಂತನವಾಗಿಸುವ ಕೆಲಸ ಸಂಸ್ಥೆ ಮಾಡುತ್ತಿದೆ. ಮರಣಹೊಂದಿದವರನ್ನು ಚಿರಂತನವಾಗಿರಿಸುವುದೇ ಸ್ಮರಣೆ ಎಂಬುದು ನನ್ನ ಭಾವನೆ. ಇಲ್ಲಿನ ಹಿರಿಯರು ಕನ್ನಡವನ್ನು ಇನ್ನೂ ಜೀವಂತವಾಗಿರಿಸಿದ್ದಾರೆ. ಹಿರಿಯರ ಜೊತೆ ಕಿರಿಯರು ಕೂಡ ಸಮಪಾಲು ತೆಗೆದುಕೊಳ್ಳಬೇಕು. ಕಿರಿಯರು ದೊಡ್ಡ ಪರಂಪರೆಯ ವಾರಸುದಾರರು. ದೊಡ್ಡವರು ಮಾತನಾಡುವಾಗ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ‘ಪುತಿನ’ ಒಂದು ಕಡೆ ಹೇಳಿದ್ದರು. ಕನ್ನಡಿಗರಿಗೆ ಬೇಕಾದಷ್ಟು ಆಸ್ತಿ ಇದೆ ಆದರೆ ಪ್ರಾಪ್ತಿ ಇಲ್ಲ. ಪಂಪ, ಕುಮಾರವ್ಯಾಸ ಅವರೆಲ್ಲ ಗ್ರಂಥ ಭಂಡಾರದಲ್ಲಿದ್ದಾರೆ. ಅವರ್ಯಾರು ಮನಸ್ಸಿಗೆ ಬರುವುದಿಲ್ಲ. ಆದರೆ ಹಾಗಾಗಬಾರದು. ಪುಸ್ತಕ ಮಸ್ತಕಕ್ಕೆ ಬರದೇ ಸಾರ್ಥಕತೆ ಪಡೆಯಲಾರದು. ನಿಜವಾದ ಕನ್ನಡ ಸಂಸ್ಕೃತಿ, ಸಾಹಿತ್ಯ, ಕಲೆ, ನೃತ್ಯ ಯಕ್ಷಗಾನ ಇದೆಲ್ಲ ಎಲ್ಲಿ ಹೋಯಿತು? ಈಗ ಅವೆಲ್ಲ ಬೀಜರೂಪದಲ್ಲಿ ನಿಮ್ಮ ಮನಸ್ಸಿಗೆ ಬಂದು ಕುಳಿತರೆ ನಾಳೆ ಮತ್ತೊಬ್ಬ ಕಾರಂತ, ಬೇಂದ್ರೆ, ಕುವೆಂಪು, ರಾಮಾನುಜರು ಹುಟ್ಟಲು ಸಾಧ್ಯ. ಎಳೆಯ ಮಕ್ಕಳಲ್ಲಿ ಸಂಸ್ಕೃತಿಯ ಬೀಜ ಬಿತ್ತುವ ಕೆಲಸವಾಗಬೇಕು. ಅವರಿಗೆ ಬೇಕೋ, ಬೇಡವೋ, ಬಲವಂತವಾಗಿಯಾದರೂ ಈ ಬಿತ್ತನೆ ಕೆಲಸ ನಡೆಯಬೇಕು. ಅವಮಾನವಾದರೂ ಸರಿಯೇ, ಅಪಹಾಸ್ಯಕ್ಕೀಡಾದರೂ ಚಿಂತೆಯಿಲ್ಲ. ನಾವು ಮಾಡಬಹುದಾದ ಕೆಲಸವನ್ನು ದೃಢವಾಗಿ ಮಾಡಬೇಕಿದೆ. ಹಾಗೆ ಮಾಡದಿದ್ದಲ್ಲಿ ನಮ್ಮ ದೇಶದ ಭವಿಷ್ಯ ಅಂಧಕಾರವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇಂದಿನ ತರುಣರೇ ನಾಳಿನ ದೇಶದ ಭವಿಷ್ಯ ನಿರ್ಧರಿಸುವವರಾಗಿದ್ದಾರೆ. ಅವರು ಬದುಕನ್ನು ಗಹನವಾಗಿ ತೆಗೆದುಕೊಳ್ಳಬೇಕು. ತಮಾಷೆಗೆ ಬೇಕಾದಷ್ಟು ಕಾಲವಿದೆ. ಅದರೆ ಗಾಂಭೀರ್ಯಕ್ಕೆ ಸಮಯವಿಲ್ಲ. ಮೆಡಿಕಲ್ ಸೈನ್ಸ್, ಮ್ಯಾನೇಜ್ಮೆಂಟ್ ಬುದ್ಧಿಯನ್ನು ಬೆಳೆಸೀತು, ಆದರೆ ಹೃದಯ ಆರ್ದೃಗೊಳಿಸುವುದು  ಕಲೆ, ಸಾಹಿತ್ಯ ಮಾತ್ರ. ಮನುಷ್ಯ ಮನುಷ್ಯನಾಗಿ ಉಳಿಸುವಂತೆ ಮಾಡುವ ಶಕ್ತಿ ಇರುವುದು ಸಾಹಿತ್ಯಕ್ಕೆ ಮಾತ್ರ ಎಂದರು.

ಕದಂಬ ರಂಗ ವೇದಿಕೆ ಅಧ್ಯಕ್ಷ ರಾಜಶೇಖರ್ ಕದಂಬ ಮಾತನಾಡಿ ಗ್ರೀನ್ ರೂಂ ಗಲಾಟೆ ನಾಟಕದಲ್ಲಿ ತಿಳಿಯಾದ ಹಾಸ್ಯವಿದೆ. ಚಿಕ್ಕದಾದರೂ ಚೊಕ್ಕದಾಗಿದೆ. ಪೂರ್ಣ ಅವಧಿಯ ನಾಟಕ ಸೃಷ್ಟಿ ಮಾಡಿಕೊಟ್ಟರೆ ನಮ್ಮ ವೇದಿಕೆಯಿಮದ ರಂಗದ ಮೇಲೆ ತರುತ್ತೇವೆ. ಅಂಥಹ ನಾಟಕ ಮಾಡಿಕೊಡಿ, ಕಾಮಿಡಿ ಕಿಲಾಡಿಗೆ ಪುಸ್ತಕವನ್ನು ಕಳುಹಿಸಿ ಕೊಟ್ಟು ಅಲ್ಲಿ ನಟಿಸುವಂತೆ ಸಲಹೆ ನೀಡುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾಭವನದ ಅಧ್ಯಕ್ಷ  ಡಾ.ಎ.ವಿ.ನರಸಿಂಹಮೂರ್ತಿ, ಎಂ.ಚಂದ್ರಶೇಖರ್, ಟಿ.ಎಸ್.ಛಾಯಾಪತಿ ಡಾ.ಎ.ಟಿ.ಭಾಷ್ಯಂ, ಕೃತಿಯ ಕರ್ತೃ ನಾ.ರಾಮಾನುಜ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: