ಪ್ರಮುಖ ಸುದ್ದಿ

ಶೋಷಣೆ, ಭ್ರಷ್ಟಾಚಾರ ತಡೆಗಟ್ಟಲು, ಕುಂದು ಕೊರತೆಗಳನ್ನು ಆಲಿಸಲು 24 ಗಂಟೆಗಳ ಕಲ್ಯಾಣ ಕೇಂದ್ರ ಸಹಾಯವಾಣಿ : ಡಾ.ಜಿ.ಪರಮೇಶ್ವರ್ ಚಾಲನೆ

ರಾಜ್ಯ(ಬೆಂಗಳೂರು)ಆ.8:-  ಸಮಾಜ ಕಲ್ಯಾಣ ಇಲಾಖೆಯಲ್ಲಿನ ಶೋಷಣೆ, ಭ್ರಷ್ಟಾಚಾರವನ್ನು ತಡೆಗಟ್ಟಲು ಹಾಗೂ ಇಲಾಖೆಗೆ ಸಂಬಂಧಪಟ್ಟ ಮಾಹಿತಿ ಹಾಗೂ ಜನರು ಎದುರಿಸುತ್ತಿರುವ ಕುಂದು ಕೊರತೆಗಳನ್ನು ಆಲಿಸಲು 24 ಗಂಟೆಗಳ ಕಾಲ ಸೇವೆ ಸಲ್ಲಿಸುವ ಕಲ್ಯಾಣ ಕೇಂದ್ರ ಸಹಾಯವಾಣಿ ಕಾರ್ಯಾರಂಭಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಮಾಜ ಕಲ್ಯಾಣ ಇಲಾಖೆ ಮೂಲಕ ಒದಗಿಸುವ ಹಾಸಿಗೆ, ದಿಂಬು, ವಸತಿ ಸೌಕರ್ಯ ಅಲ್ಲದೇ ಶುಚಿತ್ವದ ಊಟ ಸಿಗುತ್ತಿಲ್ಲವೆಂಬ ದೂರುಗಳ ಬಗ್ಗೆ ಹಲವಾರು ಬಾರಿ ಸದನಗಳಲ್ಲಿ ಚರ್ಚೆಗಳು ನಡೆದಿವೆ. ಈ ಎಲ್ಲದಕ್ಕೂ ಇತಿಶ್ರೀ ಹಾಡಲು ಹಾಗೂ ಇಲಾಖೆಯ ಎಲ್ಲಾ ಮಾಹಿತಿಗಳನ್ನು ಒದಗಿಸಲು ಈ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಇದೊಂದು ವಿನೂತನ ಕಾರ್ಯಕ್ರಮ ಇಲಾಖೆಯ ಬಗ್ಗೆ ಯಾರೂ ಬೇಕಾದರೂ ಮಾಹಿತಿ ಪಡೆಯಬಹುದು, ದೂರು ಸಲ್ಲಿಸಬಹುದು. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ರವಾನೆಯಾಗಲಿದೆ.

ತಾಲೂಕು ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಚೇರಿಗಳಲ್ಲಿ ಸಮಸ್ಯೆ ಪರಿಹಾರವಾಗದಿದ್ದರೆ, ಅಂತಿಮವಾಗಿ ಸಚಿವರ ಮಟ್ಟದಲ್ಲಿ ದೂರುದಾರರಿಗೆ ನ್ಯಾಯ ಒದಗಿಸಲಾಗುವುದೆಂದು ಹೇಳಿದರು. ರಾಜ್ಯದ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚು ಅನುದಾನವನ್ನು ಒದಗಿಸಲಾಗುವುದು. ಆವರು ಆರ್ಥಿಕವಾಗಿ ಪ್ರಬಲರಾಗಬೇಕು ಎಂಬುವುದೇ ಇದರ ಪ್ರಮುಖ ಉದ್ದೇಶ ಎಂದರು. ನೃಪತುಂಗ ರಸ್ತೆಯಲ್ಲಿರುವ ಯುವನಿಕಾ ಕೇಂದ್ರದ ಕೆಳ ಅಂತಸ್ತಿನಲ್ಲಿ ಕಲ್ಯಾಣ ಕೇಂದ್ರದ ಸಹಾಯ ವಾಣಿ ಇಂದಿನಿಂದ ಸೇವೆ ಆರಂಭಿಸಿದೆ.

ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಇಲಾಖೆಯ ನಿಗಮ ಮಂಡಳಿಗಳ ಕಾರ್ಯ ಚಟುವಟಿಕೆ ಹಾಗೂ ಹಲವು ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಾರ್ವಜನಿಕರು ಕೆಲವೇ ನಿಮಿಷಗಳಲ್ಲಿ ತಿಳಿದು ಕೊಳ್ಳಬಹುದು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು. ಇಲಾಖೆಯ ನ್ಯೂನತೆಗಳು ಹಾಗೂ ತಮಗೆ ಎದುರಾಗಿರುವ ಸಮಸ್ಯೆಗಳ ಬಗ್ಗೆಯೂ ತಮ್ಮ ಅಹವಾಲನ್ನು ದಾಖಲಿಸಿಕೊಳ್ಳಬಹುದು. ದೂರು ದಾಖಲಿಸಿದ ದೂರುದಾರರಿಗೆ ನೋಂದಣಿ ಸಂಖ್ಯೆ ಸಿಗಲಿದೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ 2500 ವಿದ್ಯಾರ್ಥಿ ವಸತಿ ನಿಲಯಗಳನ್ನು ನಡೆಸುತ್ತಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರತಿ ನಿತ್ಯದ ಬಯೋ ಮೆಟ್ರಿಕ್ ಹಾಜರಾತಿಯನ್ನು ಈ ಕಲ್ಯಾಣ ಕೇಂದ್ರದಲ್ಲಿ ಉಸ್ತುವಾರಿ ನೋಡಿಕೊಳ್ಳಲಾಗುವುದು. ಅಲ್ಲದೇ ವಿದ್ಯಾರ್ಥಿ ನಿಲಯಗಳಲ್ಲಿನ ಲೋಪ ದೋಷಗಳ ಬಗ್ಗೆಯೂ ವಿದ್ಯಾರ್ಥಿಗಳು ಸಹಾಯ ಕೇಂದ್ರಕ್ಕೆ ಮಾಹಿತಿ ದಾಖಲಿಸಬಹುದು ಎಂದು ತಿಳಿಸಿದರು.

ಅನಾಮಧೇಯ ದೂರುಗಳನ್ನು ದಾಖಲು ಮಾಡಿಕೊಂಡು ಪರಿಶೀಲಿಸಲಾಗುವುದು. ದೇಶದಲ್ಲೇ ಮೊದಲ ಬಾರಿಗೆ ಕಲ್ಯಾಣ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.

ಮೇಯರ್ ಆರ್. ಸಂಪತ್ ರಾಜ್, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: