ಪ್ರಮುಖ ಸುದ್ದಿ

ಕುಖ್ಯಾತ ಸರಗಳ್ಳ ಅಚ್ಯುತ್‌ ಕುಮಾರ್ ಗಣಿ ಮಾಡಿದ್ದು ಬರೋಬ್ಬರಿ 105 ಸರಗಳ್ಳತನ : ಕೇಳಿ ದಂಗು ಬಡಿದ ಪೊಲೀಸರು

ರಾಜ್ಯ(ಬೆಂಗಳೂರು)ಆ.8:- ಕುಖ್ಯಾತ ಸರಗಳ್ಳ ಅಚ್ಯುತ್‌ ಕುಮಾರ್ ಗಣಿ ಇಲ್ಲಿಯವರೆಗೆ 105 ಸರಗಳ್ಳತನ ಕೃತ್ಯ ನಡೆಸಿರುವುದನ್ನು ಬಹಿರಂಗಪಡಿಸಿ ನಗರ ಪೊಲೀಸರನ್ನು ದಂಗುಬಡಿಸಿದ್ದಾನೆ.

ಪೊಲೀಸರ ಗುಂಡಿನ ರುಚಿ ಅನುಭವಿಸಿ ಚಿಕಿತ್ಸೆ ಪಡೆದು ಗುಣಮುಖನಾದ ನಂತರ ವಿಚಾರಣೆಯಲ್ಲಿ ಕಳೆದ 9 ವರ್ಷಗಳಿಂದ ಸರಗಳ್ಳತನ ನಡೆಸಿ ಮೋಜು ಮಾಡುತ್ತಿರುವುದನ್ನು ಬಾಯ್ಬಿಟ್ಟಿದ್ದು, ಇದನ್ನು ಕೇಳಿದ ತನಿಖಾಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಬೆಂಗಳೂರು, ಧಾರವಾಡದಲ್ಲಿ 105 ಸರಗಳವು ಕೃತ್ಯದಲ್ಲಿ ಭಾಗಿಯಾಗಿದ್ದ ಈತ  ಪೊಲೀಸರ ಗುಂಡೇಟು ತಗುಲಿ ಸಿಕ್ಕಿಬಿದ್ದ. ವೇಶ್ಯಾವಾಟಿಕೆ, ಜೂಜಾಟ, ವಾಹನ ಖರೀದಿಗಾಗಿ ಕೃತ್ಯ ನಡೆಸಿದ್ದು, ಐಷಾರಾಮಿ ಜೀವನಕ್ಕೆ ಮಾರು ಹೋಗಿ ಸರಗಳ್ಳನಾಗಿದ್ದ. 18 ವಾರೆಂಟ್ ಜಾರಿಯಾಗಿದ್ದರೂ, ಲೆಕ್ಕಿಸದೆ ಕೃತ್ಯದಲ್ಲಿ ತೊಡಗಿದ್ದ. ಹಾವೇರಿ -ಧಾರವಾಡ ಭಾಗದಲ್ಲಿ 34ಕ್ಕೂ ಹೆಚ್ಚು ಅಪರಾಧ ಕೃತ್ಯಗಳನ್ನು ನಡೆಸಿ 18 ಪ್ರಕರಣಗಳಲ್ಲಿ ವಾರೆಂಟ್ ಎದುರಿಸುತ್ತಿದ್ದ. ಹಳೇ ಕಳ್ಳ ಅಚ್ಯುತ್‌ ಕುಮಾರ್ ಗಣಿ ನಗರದಲ್ಲಿ 77 ಸೇರಿದಂತೆ 105 ಸರಗಳವು ಮಾಡಿದ್ದಾನೆ.

ಆರೋಪಿಯು ನೀಡಿದ ಮಾಹಿತಿಯಾಧರಿಸಿ ಆತ ಕಳವು ಮಾಡಿದ್ದ 1 ಕೋಟಿ 6 ಲಕ್ಷ ಮೌಲ್ಯದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಜೂ. 17 ರಂದು ಗುಂಡೇಟು ತಗುಲಿ ಗಾಯಗೊಂಡಿದ್ದ ಧಾರವಾಡ ಜಿಲ್ಲೆಯ ಕೋಳಿವಾಡದ ಅಚ್ಯುತ್‌ಕುಮಾರ್ ಗಣಿ (31) ಗುಣಮುಖನಾದ ನಂತರ ನಡೆಸಿದ ವಿಚಾರಣೆಯಲ್ಲಿ ಸತ್ಯ ಬಾಯ್ಬಿಟ್ಟಿದ್ದಾನೆ. ನಗರದಲ್ಲಿ ಇಲ್ಲಿಯವರೆಗೆ ಬಂಧಿಸಿರುವ ಸರಗಳ್ಳರಲ್ಲಿ ಅತಿ ಹೆಚ್ಚು ಸರಗಳವು ಮಾಡಿದ ಕುಖ್ಯಾತಿಗೆ ಪಾತ್ರನಾಗಿರುವ ಅಚ್ಯುತಕುಮಾರ್ ಗಣಿಯಿಂದ 1 ಕೋಟಿ 6 ಲಕ್ಷ ಮೌಲ್ಯದ 3 ಕೆಜಿ 543 ಗ್ರಾಂ ತೂಕದ ಚಿನ್ನದ ಸರಗಳನ್ನು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ 5 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ತಿಳಿಸಿದರು. ಕುಂಬಳಗೋಡಿನ ಕಣ್‌ಮಿಣಕಿ ಗ್ರಾಮದಲ್ಲಿ ವಾಸವಾಗಿದ್ದ ಆರೋಪಿಯು ಜೂಜಾಟ, ವೇಶ್ಯಾವಾಟಿಕೆ, ವಾಹನಗಳ ಖರೀದಿಯ ಶೋಕಿ ಸೇರಿದಂತೆ ಐಷಾರಾಮಿ ಜೀವನಕ್ಕೆ ಕಳವು ಮಾಡಿದ ಚಿನ್ನಾಭರಣಗಳನ್ನು ಹಳೆ ಸ್ನೇಹಿತ ಕೊಪ್ಪಳದ ಗವಿಸಿದ್ದೇಶ್ ಎಂಬಾತನ ಮೂಲಕ ಮಾರಾಟ ಮಾಡುತ್ತಿದ್ದ, ಆತನನ್ನು ಬಂಧಿಸಲಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವುದಾಗಿ ನಂಬಿಸಿ ಮಹಾದೇವಿ ಎಂಬಾಕೆಯನ್ನು ವಿವಾಹವಾಗಿದ್ದು, ಆಕೆಯೂ ಕೂಡ ಈತನ ಸರಗಳವು ಕೃತ್ಯಕ್ಕೆ ಸಹಕರಿಸಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಆಕೆಯ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಯು ಹಳೆ ಕಳ್ಳನಾಗಿದ್ದು, ಹಿಂದೆ ಹುಬ್ಬಳ್ಳಿ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ 34 ಪ್ರಕರಣಗಳಲ್ಲಿ ಬಂಧಿತನಾಗಿದ್ದ. ಈತನ ವಿರುದ್ಧ 18 ಪ್ರಕರಣಗಳಲ್ಲಿ ವಾರೆಂಟ್ ಜಾರಿಯಾಗಿದೆ. ಆರೋಪಿಯು ರಿಯಲ್ ಎಸ್ಟೇಟ್ ಉದ್ಯಮಿ ಎಂದು ಹೇಳಿಕೊಂಡು 2-3 ತಿಂಗಳಿಗೊಮ್ಮೆ ಮನೆಯನ್ನು ಬದಲಾಯಿಸುತ್ತಿದ್ದ. ಒಂಟಿಯಾದಿ ಓಡಾಡುವ ಮಹಿಳೆಯರು, ವಯಸ್ಸಾದವರನ್ನು ಗುರಿಯಾಗಿಸಿಕೊಂಡು ಸರಗಳವು ಮಾಡುತ್ತಿದ್ದ ಈತ, ಮೂರ್ನಾಲ್ಕು ಕಡೆ ಕೃತ್ಯ ನಡೆಸಿದ ನಂತರ ಸರಗಳನ್ನು 15 ದಿನಗಳಿಗೊಮ್ಮೆ ಗವಿ ಸಿದ್ದೇಶ್ ಮೂಲಕ ವಿಲೇವಾರಿ ಮಾಡಲು ಕೊಪ್ಪಳಕ್ಕೆ ಹೋಗುತ್ತಿದ್ದ ಎಂದು ವಿವರಿಸಿದರು. ಕೆಲವೊಮ್ಮೆ ಒಂಟಿಯಾಗಿ ಮತ್ತೊಮ್ಮೆ ಹಳೆ ಕಳ್ಳ ಗದಗದ ಶಿವು ಹೀರೇಮಠ್ ಎಂಬ ಸಹಚರನ ಜೊತೆ ಸೇರಿ ಸರಗಳವು ಮಾಡುತ್ತಿದ್ದ. 2009 ರಿಂದ ಸರಗಳ್ಳತನವನ್ನೇ ವೃತ್ತಿಯಾಗಿಸಿಕೊಂಡು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರ ನ್ಯಾಯಾಲಯಕ್ಕೆ ಹಾಜರಾಗದೆ ಐಷಾರಾಮಿ ಜೀವನಕ್ಕಾಗಿ ಮತ್ತೆ ಕೃತ್ಯವನ್ನು ಮುಂದುವರೆಸುತ್ತಿದ್ದ. ಕಳೆದ ಜೂ. 17 ರಂದು ಆರೋಪಿಯು ಸರಗಳವು ಮಾಡಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಜ್ಞಾನಭಾರತಿ ಠಾಣೆಯ ಮುಖ್ಯಪೇದೆ ಚಂದ್ರುಕುಮಾರ್ ಅನುಮಾನದ ಮೇಲೆ ಬೆನ್ನಟ್ಟಿ ಕಾರ್ಯಾಚರಣೆಗಳಿದಿದ್ದರು. ಅವರಿಂದ ತಪ್ಪಿಸಿಕೊಂಡಿದ್ದ ಆತನನ್ನು ರಾತಿಯಿಡೀ ಕಾರ್ಯಾಚರಣೆ ನಡೆಸಿ ಮುಂಜಾನೆ ಗುಂಡು ಹಾರಿಸಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ವಿಜಯನಗರ, ಚಂದ್ರಾಲೇಔಟ್, ಅನ್ನಪೂರ್ಣೇಶ್ವರಿ ನಗರ, ಜ್ಞಾನಭಾರತಿ, ಕೆಂಗೇರಿ, ರಾಜರಾಜೇಶ್ವರಿ ನಗರ ಇನ್ನಿತರ ಕಡೆಗಳಲ್ಲಿ ಹೆಚ್ಚು ಸರ ಅಪಹರಣ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಪಶ್ಚಿಮ ವಿಭಾಗದಲ್ಲಿಯೇ 37 ಪ್ರಕರಣಗಳು ದಾಖಲಾಗಿದ್ದರೆ, ಇತರ ಭಾಗಗಳಲ್ಲಿ 40 ಪ್ರಕರಣಗಳು, ಬಳ್ಳಾರಿಯಲ್ಲಿ 10, ಬೆಂಗಳೂರು ಗ್ರಾಮಾಂತರದಲ್ಲಿ 4 ಸೇರಿ 105 ಸರಗಳವು ಕೃತ್ಯದಲ್ಲಿ ಭಾಗಿಯಾಗಿದ್ದ. ಅಚ್ಯುತ್‌ಕುಮಾರ್ ಗಣಿಯ ಬಂಧನ ಕಾರ್ಯಾಚರಣೆಯಲ್ಲಿ ತೊಡಗಿದ್ದ ಪಶ್ಚಿಮ ವಿಭಾಗದ ಡಿಸಿಪಿ ರವಿಚೆನ್ನಣ್ಣನವರ್ ನೇತೃತ್ವದ 3 ವಿಶೇಷ ತಂಡಗಳಿಗೆ 2 ಲಕ್ಷ ನಗದು ಬಹುಮಾನವನ್ನು ಹಾಗೂ ಕಾರ್ಯಾಚರಣೆಯಲ್ಲಿ ಪ್ರಮುಖಪಾತ್ರ ವಹಿಸಿದ್ದ ಮುಖ್ಯಪೇದೆ ಚಂದ್ರಕುಮಾರ್‌ಗೆ 25 ಸಾವಿರ ನಗದು ಬಹುಮಾನವನ್ನು ಸುನಿಲ್ ಕುಮಾರ್ ಘೋಷಿಸಿದರು. ಸರಗಳವು ನಡೆದಿದ್ದ ವಾರಸುದಾರರಿಗೆ ಸರಗಳನ್ನು ವಿತರಿಸಲಾಯಿತು. ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ ಸಿಂಗ್, ಡಿಸಿಪಿ ರವಿಚೆನ್ನಣ್ಣನವರ್ ಅವರು ಸುದ್ದಿಗೋಷ್ಠಿಯಲ್ಲಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: