ಮೈಸೂರು

ಆ.10 ರಿಂದ ವಸ್ತ್ರ ಉತ್ಸವ -2018

ಖಾದಿ, ಕೈಮಗ್ಗ, ರೇಷ್ಮೆ ಸೇರಿದಂತೆ ವಿವಿಧ ಕರಕುಶಲ ವಸ್ತುಗಳ ಮಾರಾಟ

ಮೈಸೂರು, ಆ.8 :ರಾಜ್ಯ ಸರ್ಕಾರದ ಬೃಹತ್ ಮತ್ತು ಮೆಗಾ ಕೈಗಾರಿಕಾ ನಿರ್ದೇಶನಾಲಯ, ಜಿಲ್ಲಾ ಕೈಗಾರಿಕಾ ಕೇಂದ್ರ, ಜೆಎಸ್‌ಎಸ್ ಅರ್ಬನ್ ಹಾತ್ ಸಹಯೋಗದೊಂದಿಗೆ ವಸ್ತ್ರ ಉತ್ಸವ-2018 ವಸ್ತು ಪ್ರದರ್ಶನ ಮತ್ತು ಮಾರಾಟವನ್ನು ಆ.10ರಿಂದ 19 ರವರೆಗೆ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.10ರ ಸಂಜೆ 4 ಗಂಟೆಗೆ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡುವರು, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ನಹೀಮಾ ಸುಲ್ತಾನಾ ನಜೀರ್ ಅಹಮದ್, ಮಹಾಪೌರರಾದ ಬಿ.ಭಾಗ್ಯವತಿ ಮುಂತಾದವರು ಭಾಗವಹಿಸುವರು ಎಂದು ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರಗಳು ಆಯಾ ಜಿಲ್ಲೆಗಳಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಮಾರಾಟ ಮಾಡಲು ಪ್ರತಿ ವರ್ಷ ಕೈಲಾವೈಭವ ವಸ್ತು ಪ್ರದರ್ಶನವನ್ನು ಆಯಾ ಜಿಲ್ಲೆಗಳಲ್ಲಿ ಆಯೋಜಿಸುತ್ತ ಬಂದಿದೆ ಎಂದರು.

ವಸ್ತು ಪ್ರದರ್ಶನದಲ್ಲಿ ಕೈಗಾರಿಕೆಗಳು, ಸಣ್ಣ ಕೈಗಾರಿಕಗಳು, ಸ್ಥಳೀಯ ಹಾಗೂ ಗುಡಿ ಕೈಗಾರಿಕಾಗಳು, ಸ್ವಸಹಾಯ ಸಂಘಗಳು ಹಾಗೂ ಸ್ತ್ರೀ ಶಕ್ತಿ ಸಂಘಗಳು, ಖಾದಿ ಗ್ರಾಮೋದ್ಯೋಗಗಳು, ಸ್ವಯಂ ಉದ್ಯೋಗಿಗಳು, ಕರಕುಶಲಕರ್ಮಿಗಳು, ಕೈಮಗ್ಗ ನೇಕಾರರ ಸಹಕಾರ ಸಂಘಗಳು ಮತ್ತು ಇತರೆ ಸಂಘ ಸಂಸ್ಥೆಗಳು ತಯಾರಿಸಿದ ಗುಣಮಟ್ಟವುಳ್ಳ ವಸ್ತುಗಳಾದ ಕೈ ಮಗ್ಗ ವಸ್ತುಗಳು, ಆಕರ್ಷಿಣಿಕ ವಸ್ತುಗಳು, ಕೈಮಗ್ಗ ಮತ್ತು ರೇಷ್ಮೆ ಹಾಗೂ ಕಾಟನ್ ಸೀರೆಗಳು, ಹೊದಿಕೆಗಳು, ವಿವಿಧ ಲೋಹ, ಜರಿ ಕಸೂತಿಗಳು, ಸಿದ್ಧ ಉಡುಪುಗಳು, ಶಿಲ್ಪಗಳು, ಕುಂಬಾರಿಕೆ, ಚರ್ಮ ಮತ್ತು ಮರಗಳಿಂದ ಮಾಡಿದ ಆಟಿಕೆಗಳು, ಬೊಂಬೆ ಸಾಮಾನುಗಳು, ಇತರೆ ಗೃಹಬಳಕೆ ವಸ್ತುಗಳು, ಗಿಡ ಮೂಲಕೆ ಔಷಧಿಗಳು, ಬುಡಕಟ್ಟು ಜನಾಂಗದ ಆಭರಣಗಳು, ಬಿದ್ರಿ ಹಾಗೂ ಉತ್ತರ ಕರ್ನಾಟಕದ ರುಚಿಕರವಾದ ಖಾದ್ಯಗಳು ದೊರೆಯಲಿವೆ. ಮೇಳವು ಪ್ರತಿದಿನ ಬೆಳಿಗ್ಗೆ ೧೦ರಿಂದ ರಾತ್ರಿ ೯ರವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ವಿಭಾಗದ(ಯೋ ಮತ್ತು ಆ) ನಿರ್ದೇಶಕ ಡಾ.ಸಿ.ರಂಗನಾಥಯ್ಯ, ವಿಭಾಗದ ಜಂಟಿ ಕಾರ್ಯದರ್ಶಿ ಬಿ.ಆರ್.ಉಮಾಕಾಂತ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಚೋಡಯ್ಯ, ಜೆಎಸ್‌ಎಸ್ ಅರ್ಬನ್ ಹಾತ್ ಸಂಚಾಲಕ ರಾಕೇಶ್ ರೈ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: