ಕರ್ನಾಟಕಪ್ರಮುಖ ಸುದ್ದಿ

ರಾಜಭವನ ನೋಡಲು ಜನಸಾಮಾನ್ಯರಿಗೆ ಸುವರ್ಣಾವಕಾಶ

ಬೆಂಗಳೂರು (ಆ.8): ಬೆಂಗಳೂರಿನ ರಾಜಭವನ ಆಗಸ್ಟ್ 16ರಿಂದ 31ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ. ಇತ್ತೀಚಿನ ದಿನಗಳಲ್ಲಿ ಆಹ್ವಾನಿತ ಗಣ್ಯರು ಮತ್ತು ಅತಿಥಿಗಣ್ಯರಿಗೆ ಮಾತ್ರ ಸೀಮಿತವಾಗಿತ್ತು. ದೆಹಲಿ ರಾಷ್ಟ್ರಪತಿ ಭವನ ಮಾದರಿಯಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಪ್ರವೇಶ ಕಲ್ಪಿಸಲಿದೆ.

ಈ ಅವಧಿಯಲ್ಲಿ ಸಾರ್ವಜನಿಕರು ರಾಜಭವನದ ಕಟ್ಟಡ, ವಿಶಾಲ ಉದ್ಯಾನ, ಗಾಜಿನ ಮನೆ ಎಲ್ಲವನ್ನೂ ವೀಕ್ಷಿಸಬಹುದಾಗಿದೆ. ಆದರೆ ಸಾರ್ವಜನಿಕರ ಪ್ರವೇಶಕ್ಕೆ ಕೆಲವು ನಿಯಮ ಹಾಗೂ ಷರತ್ತುಗಳು ಅನ್ವಯವಾಗುತ್ತದೆ. ಆಗಸ್ಟ್ 16ರಿಂದ 31ರವರೆಗೆ ಸಂಜೆ 4 ಗಂಟೆಯಿಂದ 6.30ರವರೆಗೆ ಸಾರ್ವತ್ರಿಕ ರಜಾ ದಿನಗಳಲ್ಲೂ ಪ್ರವೇಶವಿರುತ್ತದೆ.

ಭೇಟಿಗೆ ಕನಿಷ್ಠ ಐದು ದಿನಗಳ ಮೊದಲು ಹೆಸರು ನೋಂದಾಯಿಸಿಕೊಳ್ಳಬೇಕು. ಒಂದು ತಂಡದಲ್ಲಿ 30 ಜನರಿಗೆ ಪ್ರವೇಶ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ತಂಡದ ಸುತ್ತಾಟಕ್ಕೆ 30 ನಿಮಿಷ ಮಾತ್ರ ಕಾಲಾವಕಾಶ ನೀಡಲಾಗುತ್ತದೆ. ನಿಗದಿತ ಸಮಯಕ್ಕಿಂತ 15 ನಿಮಿಷ ಮೊದಲು ಬರಬೇಕು, ಗುರುತಿನ ಚೀಟಿ ಹೊಂದಿರಬೇಕು. ಕೈಚೀಲ, ಮೊಬೈಲ್‌, ಕ್ಯಾಮರಾವನ್ನು ಕೊಂಡೊಯ್ಯುವಂತಿಲ್ಲ ಪ್ರವೇಶ ಉಚಿತವಾಗಿರುತ್ತದೆ. ಪ್ರವೇಶಕ್ಕೆ ವೆಬ್ ಸೈಟ್ ನಲ್ಲಿ ನೋಂದಾಯಿಸಿಕೊಳ್ಳಬೇಕು.

ಜನಸಾಮಾನ್ಯರ ರಾಜ್ಯಪಾಲರು ಎಂಬ ಖ್ಯಾತಿಗೆ ಪಾತ್ರರಾಗಿದ್ದ ವಿ.ಎಸ್‌.ರಮಾದೇವಿ ಅಧಿಕಾರಾವಧಿ ಬಳಿಕ ಜನಸಾಮಾನ್ಯರಿಗೆ ರಾಜಭವನ ಪ್ರವೇಶಿಸಲು ಅನುಮತಿ ಇರಲಿಲ್ಲ. ಇದೀಗ ಮತ್ತೊಮ್ಮೆ ಸಾರ್ವಜನಿಕರಿಗೆ ರಾಜಭವನ ತೆರೆದುಕೊಳ್ಳಲಿದೆ ಆಗಸ್ಟ್ 16ರಿಂದ 31ರವರೆಗೆ ರಾಜಭವನ ವೀಕ್ಷಿಸಲು ಬಯಸುವವರು ಮುಕ್ತವಾಗಿ ತೆರಳಬಹುದಾಗಿದೆ.(ಎನ್.ಬಿ)

Leave a Reply

comments

Related Articles

error: