ಕರ್ನಾಟಕಪ್ರಮುಖ ಸುದ್ದಿಮೈಸೂರು

ಸೈಬರ್ ಅಪರಾಧ ತಡೆಯಲು ಜಿಲ್ಲಾ ಕೇಂದ್ರಗಳಲ್ಲಿ ಸೈಬರ್ ಸ್ಕ್ವಾಡ್ ಸ್ಥಾಪನೆ : ಡಾ.ಜಿ.ಪರಮೇಶ್ವರ್

police-web-2 ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ  ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸೈಬರ್ ಸ್ಕ್ವಾಡ್ ಸ್ಥಾಪಿಸಲಾಗುವುದು ಎಂದು  ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಮೈಸೂರಿನ ನಜರ್‌ಬಾದ್‌ನಲ್ಲಿರುವ  ಕರ್ನಾಟಕ ಪೊಲೀಸ್ ಅಕಾಡೆಮಿ  ಮೈದಾನದಲ್ಲಿ ಸೋಮವಾರ ಸಂಜೆ  ರಾಜ್ಯ ಪೊಲೀಸ್ ಇಲಾಖೆ ಏರ್ಪಡಿಸಿದ್ದ   ಐದು ದಿನಗಳ 60 ನೇ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟ-2016 ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಚಿವ ಪರಮೇಶ್ವರ ಮಾತನಾಡಿದರು.

ಪೊಲೀಸರಿಗೆ ಸೈಬರ್ ಅಪರಾಧಗಳನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿದ್ದು, ಈ ಹಿನ್ನಲೆಯಲ್ಲಿ  ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ವಲಯ ಮಟ್ಟದಲ್ಲಿ  ಸೈಬರ್ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಯಿತು. ಈಗ ಸೈಬರ್ ಅಪರಾಧಗಳು ಮತ್ತಷ್ಟು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಎಲ್ಲಾ ಜಿಲ್ಲೆಗಳಲ್ಲಿ  ಸೈಬರ್ ಸ್ಕ್ವಾಡ್ ಸ್ಥಾಪಿಸಲು ಯೋಜಿಸಿದೆ ಎಂದು ಹೇಳಿದರು. ಸಮಾಜದ ರಕ್ಷಣೆ, ದೇಶದ ಆಂತರಿಕ ಭದ್ರತೆ, ಮಹಿಳೆ ಮತ್ತು ಮಕ್ಕಳು, ವೈಯುಕ್ತಿಕವಾಗಿ ರಕ್ಷಣೆ ಮಾಡಿಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಕರವಾಗಿದೆ. ಜತೆಗೆ ಹಲವಾರು ಸವಾಲುಗಳನ್ನು ಎದುರಿಸಬೇಕಿದೆ. ಗುಪ್ತಚರ, ಸೈಬರ್ ಅಪರಾಧ, ಶ್ವಾನದಳ,  ಪೋಟೋಗ್ರಫಿ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಯಾಗಿರುವ ತಂತ್ರಜ್ಞಾನ ಬಳಸಬೇಕಿದೆ ಎಂದು ಸಲಹೆ ನೀಡಿದರು.

ದೇಶದಲ್ಲಿ ಬೆಂಗಳೂರು ಸೇರಿದಂತೆ ವಿವಿಧೆಡೆ ಸ್ಲೀಪರ್ ಸೆಲ್‌ಗಳಿದ್ದು, ಅಂತಹವರನ್ನು ಪತ್ತೆ ಹಚ್ಚಿ ಮಟ್ಟ ಹಾಕುವುದು ಸುಲಭದ ಕೆಲಸವಲ್ಲ. ಅತ್ಯಾಚಾರ, ಕೊಲೆ, ಸರಗಳ್ಳತನ ಸೇರಿದಂತೆ ವಿವಿಧ ಅಪರಾಧಗಳ ಪತ್ತೆಗೆ ಹಾಗೂ ಶ್ವಾನದಳದಲ್ಲಿ ತಂತ್ರಜ್ಞಾನ ಬಳಕೆ ಮಾಡಬೇಕಿದೆ ಎಂದು ತಿಳಿಸಿದರು. ಪೊಲೀಸ್ ಕರ್ತವ್ಯ ಕೂಟವನ್ನು  ರಾಜ್ಯಪಾಲ ವಜುಭಾಯಿ ರೂಢಾಭಾಯಿ ವಾಲಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪೊಲೀಸರು  ಕರ್ಮಚಾರಿಗಳಲ್ಲ  ನಿಜವಾದ ಕರ್ಮ ಯೋಗಿಗಳು, ಯೋಧರು  ದೇಶದ ಗಡಿ ಕಾದರೆ, ದೇಶದ ಆಂತರಿಕ ಭದ್ರತೆಯನ್ನು ಕಾಯುವವರು ಪೊಲೀಸರು   ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ,  ಮೇಲಾಧಿಕಾರಿಗಳು ಮೌಖಿಕವಾಗಿ ಕಾನೂನು ಬಾಹಿರವಾಗಿ ಕೆಲಸ ಕಾರ್ಯಗಳನ್ನು ಹೇಳಿದರೆ ಮಾಡಬೇಡಿ, ಈ ಕುರಿತು ಸುಪ್ರಿಂಕೋರ್ಟ್ ಕೂಡ ನಿರ್ದೇಶನ ನೀಡಿದೆ. ಲಿಖಿತವಾಗಿ ಹೇಳಿದರೆ ಅಂತಹ ಕೆಲಸವನ್ನು ಮಾಡಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ  ಡಿಜಿಪಿ ಓಂಪ್ರಕಾಶ್, ಸಿಐಡಿ ಡಿಜಿಪಿ ಎಚ್.ಸಿ. ಕಿಶೋರ್‌ಚಂದ್ರ, ತರಬೇತಿ ಡಿಜಿಪಿ ಪ್ರೇಮ್‌ಶಂಕರ್ ಮೀನಾ, ಕಾರಾಗೃಹ ಡಿಜಿಪಿ ಎಚ್.ಎನ್. ಸತ್ಯನಾರಾಯಣ ರಾವ್, ಅಪರಾಧ ಮತ್ತು ತಾಂತ್ರಿಕ ಸೇವೆಗಳ ಎಡಿಜಿಪಿ ಭಾಸ್ಕರ್ ರಾವ್, ಕೆಪಿಎ ನಿರ್ದೇಶಕ ವಿಪುಲ್‌ಕುಮಾರ್, ನಗರ ಪೊಲೀಸ್ ಆಯುಕ್ತ ಡಾ.ಎ. ಸುಬ್ರಹ್ಮಣ್ಯೇಶ್ವರ ರಾವ್ ಇದ್ದರು.

ಈ ಕೂಟದಲ್ಲಿ ದೇಶದ ವಿವಿಧ ರಾಜ್ಯಗಳಿಂದ 32 ವಿವಿಧ ತಂಡಗಳಲ್ಲಿ  1500 ಮಂದಿ ಪೊಲೀಸರು ಭಾಗವಹಿಸಿದ್ದಾರೆ.

Leave a Reply

comments

Related Articles

error: