
ಮೈಸೂರು
ಎಚ್ಚರ..ಎಚ್ಚರ..ಎಲ್ಲೆಂದರಲ್ಲಿ ಡೆಬ್ರೀಸ್ ಸುರಿದರೆ ದಂಡ ಹಾಗೂ ಜೈಲುವಾಸ ಶಿಕ್ಷೆ
ಸಾರ್ವಜನಿಕರೇ..ಸ್ವಚ್ಛನಗರಿ ಮೈಸೂರಿನಲ್ಲಿ ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಸುರಿದರೆ ದಂಡ ಹಾಗೂ ಕಾರಾಗೃಹವಾಸವನ್ನು ಅನುಭವಿಸಬೇಕಾದಿತು ಎನ್ನುವ ಎಚ್ಚರಿಕೆಯನ್ನು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಪ್ರಕಟಿಸಿದ್ದಾರೆ.
ದೇಶದಲ್ಲಿಯೇ ಸ್ವಚ್ಛಚನಗರಿ ಪ್ರಶಸ್ತಿಯನ್ನು ಎರಡು ಬಾರಿ ಮುಡಿಗೇರಿಸಿಕೊಂಡಿರುವ ಮೈಸೂರಿನಲ್ಲಿ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಅದರಂತೆ ಕಟ್ಟಡ ನಿರ್ಮಾಣ, ದುರಸ್ತಿ, ನವೀಕರಣ ಸಂದರ್ಭದಲ್ಲಿ ಉತ್ಪತ್ತಿಯಾಗುವ ಡೆಬ್ರೀಸ್ ಅನ್ನು ಜನಸಂಚಾರವಿಲ್ಲದ ರಸ್ತೆಗಳಲ್ಲಿ, ಖಾಲಿ ನಿವೇಶನದಲ್ಲಿ ಸುರಿಯುತ್ತಿದ್ದು ಇದರಿಂದ ನಗರದ ಸೌಂದರ್ಯಕ್ಕೆ ಕುಂದುಂಟಾಗುವುದು ಎಂದು ಎಚ್ಚೆತ್ತುಕೊಂಡಿರುವ ನಗರಪಾಲಿಕೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಿದೆ.
ನಗರದ ಹೊರವಲಯದ ಕುಪ್ಪಲೂರು ಗ್ರಾಮ ನಾಚನಹಳ್ಳಿ, ಪಾಳ್ಯದ ಸರ್ವೇ ನಂ.147ರಲ್ಲಿ 8 ಎಕರೆ ಜಾಗವನ್ನು ಕಟ್ಟಡ ತ್ಯಾಜ್ಯ ವಿಲೇವಾರಿಗೆಂದು ಗುರುತಿಸಲಾಗಿದ್ದು ಅಲ್ಲೇ ಡೆಬ್ರೀಸ್ ಸುರಿಯಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಸುರಿದರೆ ಕರ್ನಾಟಕ ಪೌರ ನಿಗಮ ಕಾಯ್ದೆ ಪ್ರಕರಣ 256ರ ಅಡಿಯಲ್ಲಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಪ್ರತಿ ಲೋಡ್ಗೆ 5 ಸಾವಿರ ರೂಪಾಯಿ ದಂಡವನ್ನು ವಾಹನ ಹಾಗೂ ಕಟ್ಟಡ ಮಾಲೀಕರಿಗೆ ವಿಧಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಪ್ರಕಟಣೆ ಹೊರಡಿಸಿದ್ದಾರೆ.