ಕರ್ನಾಟಕಪ್ರಮುಖ ಸುದ್ದಿ

ಕರಾವಳಿ, ಕೊಡಗಿನಲ್ಲಿ ಮತ್ತೆ ಮುಂಗಾರು ಆರ್ಭಟ: ಸಂಚಾರ ಅಸ್ತವ್ಯಸ್ಥ, ಶಾಲೆಗಳಿಗೆ ರಜೆ

ಮಂಗಳೂರು (ಆ.9): ಪಶ್ಚಿಮ ಘಟ್ಟ ಪ್ರದೇಶ, ಕರಾವಳಿ, ಒಳನಾಡಿನ ಹಲವೆಡೆ ನಿರಂತರ ಮಳೆಯಾಗುತ್ತಿದ್ದು, ಗುಂಡ್ಯ ಸಮೀಪ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಪುತ್ತೂರು ತಾಲೂಕಿನ ಗುಂಡ್ಯ ಸಮೀಪದ ರಾಷ್ಟ್ರೀಯ ಹೆದ್ದಾರಿ 75ರ ಉದನೆ ಪ್ರದೇಶದ ರಸ್ತೆಯಲ್ಲಿ ನದಿ ನೀರು ಹರಿಯುತ್ತಿದೆ. ಇದರಿಂದ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ವಾಹನಗಳು ನಿಂತಿವೆ.

ಹೆದ್ದಾರಿಯಲ್ಲಿ ನಿಂತಿರುವ ನೀರು ಕಡಿಮೆಯಾಗುವ ತನಕ ಸಂಚಾರ ನಿರ್ಬಂಧಿಸಲಾಗಿದೆ. ಮುಂಜಾಗೃತ ಕ್ರಮವಾಗಿ ಸ್ಥಳದಲ್ಲಿ ಅಗ್ನಿಶಾಮಕ ದಳ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ. ಮಳೆಯಿಂದಾಗಿ ಕರಾವಳಿಯ ನದಿ ಮತ್ತು ಹೊಳೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಶಿಶಿಲೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದ್ದು, ಕಪಿಲಾ ಹೊಳೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಶಿಶಿಲೇಶ್ವರ ದೇವಸ್ಥಾನ ಸಂಪರ್ಕಿಸುವ ತೂಗು ಸೇತುವೆ ಕೂಡ ಮುಳುಗಡೆಯಾಗಿದೆ.

ಬುಧವಾರ ರಾತ್ರಿಯಿಂದಲೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಾಗುತ್ತಿದೆ. ಮಳೆ ಜೋರಾಗಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಮಾಣಿ -ಮೈಸೂರು ರಾಜ್ಯ ಹೆದ್ದಾರಿಯ ಪೆರಾಜೆ ಸಮೀಪದ ಅಪಾಯಕಾರಿ ಹೊಂಡಗಳನ್ನು ಸುಳ್ಯ ಠಾಣೆಯ ಎಸ್.ಐ. ಮಂಜುನಾಥ್ ಮತ್ತು ಸಿಬ್ಬಂದಿ ಮುಚ್ಚಿದ್ದಾರೆ. ಲಾಠಿ ಹಿಡಿಯುವ ಕೈಗಳು ಹೆದ್ದಾರಿಯಲ್ಲಿ ಹಾರೆ ಮತ್ತು ಪಿಕಾಸು ಹಿಡಿದು ಹೆದ್ದಾರಿಯ ಅಪಾಯಕಾರಿ ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚಿಸಿದ್ದಾರೆ. ಎಡೆ ಬಿಡದೆ ಮಳೆಯ ನಡುವೆಯೂ ಪೊಲೀಸರ ಈ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

ಕೊಡಗು ಜಿಲ್ಲೆಯಲ್ಲೂ ಭಾರಿ ಮಳೆಯಾಗುತ್ತಿದ್ದು, ಮಡಿಕೇರಿ, ಮಂಗಳೂರು, ಚಿಕ್ಕಮಗಳೂರು, ಹಾಸನದಲ್ಲಿ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಕೊಡಗಿನ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ಮಡಿಕೇರಿ-ಮಂಗಳೂರು ಹೆದ್ದಾರಿ ಕುಸಿಯುವ ಭೀತಿ ಎದುರಾಗಿದ್ದು, ಬದಲಿ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ಕೊಡಗು ಜಿಲ್ಲಾಡಳಿತ ಆದೇಶ ನೀಡಿದೆ. ಸೆ.29ರವರೆಗೂ ಮಡಿಕೇರಿಯಿಂದ ಮೇಕೇರಿ, ತಾಳತ್‍ಮನೆ ಮಾರ್ಗವಾಗಿ ವಾಹನ ಸಂಚಾರಕ್ಕೆ ಸೂಚನೆ ನೀಡಲಾಗಿದೆ.

ಅಡುಗೆ ಅನಿಲ, ಇಂಧನ, ಹಾಲು ಪೂರೈಕೆ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಕೂಡ ಮುಳುಗಡೆಯಾಗಿದ್ದು, ರೈತರ ಹೊಲಗಳಿಗೆ ನೀರು ನುಗ್ಗಿರುವುದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

ತುಂಗಾ, ಭದ್ರ, ಹೇಮಾವತಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಇತ್ತ ಸಕಲೇಶಪುರ ತಾಲೂಕಿನ ಯಡಕುಮಾರಿ ಬಳಿ ರೈಲು ಹಳಿ ಮೇಲೆ ಭಾರೀ ಭೂ ಕುಸಿತ ಉಂಟಾಗಿದ್ದು, ಬೆಂಗಳೂರು-ಮಂಗಳೂರು ಮಾರ್ಗದ ರೈಲು ಹಾಸನದಲ್ಲಿ ಸ್ಥಗಿತಗೊಂಡಿದೆ. ಬುಧವಾರ ಕತ್ತಲೆ ಇದ್ದ ಕಾರಣ ಇಂದು ತೆರವು ಕಾರ್ಯ ನಡೆಯಲಿದೆ. ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ತುಂಬಿ ಹರಿದಿದ್ದು ದಡದಲ್ಲಿರುವ ನಿವಾಸಿಗಳು ಆತಂಕ ಎದುರಿಸುತ್ತಿದ್ದಾರೆ. ಸುಬ್ರಹ್ಮಣ್ಯ ಬಳಿಯ ಹೊಸ್ಮಠ ಸೇತುವೆ ಈ ಬಾರಿ ದಾಖಲೆ ಎಂಬಂತೆ ಆಗಸ್ಟ್ ತಿಂಗಳಲ್ಲಿಯೂ ಮುಳುಗಡೆಯಾಗಿದೆ. ಕುಕ್ಕೆ ದೇಗುಲದ ಸ್ನಾನಘಟ್ಟವೂ ಮುಳುಗಿದ್ದು ಪ್ರವಾಸಿಗರು ಭೀತಿ ಪಡುವಂತಾಗಿದೆ.(ಎನ್.ಬಿ)

Leave a Reply

comments

Related Articles

error: