ಮೈಸೂರು

ಪಿರಿಯಾಪಟ್ಟಣ ವ್ಯವಸಾಯ ಸಹಕಾರ ಸಂಘದಿಂದ ನಿವೇಶನ ಒತ್ತುವರಿ: ಮಾಲೀಕರ ಆರೋಪ

ತಮ್ಮ ಮಾಲೀಕತ್ವದ ಪಿರಿಯಾಪಟ್ಟಣ ತಾಲೂಕು, ಬೆಟ್ಟದಪುರ ಗ್ರಾಮಕ್ಕೆ ಸೇರಿದ ಖಾಲಿ ನಿವೇಶನವನ್ನು ವ್ಯವಸಾಯ ಸೇವಾ ಸಹಕಾರ ಸಂಘದವರು ಅತಿಕ್ರಮಿಸಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಬೆಟ್ಟದಪುರದ ಎ.ಪಿ.ಎಂ.ಸಿ. ಮಾಜಿ ಉಪಾಧ್ಯಕ್ಷ ಬಿ.ಪಿ. ಪ್ರತಾಪ್ ಆರೋಪಿಸಿದ್ದಾರೆ.

ಮೈಸೂರಿನ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಪ್ರತಾಪ್ ಅವರು, “ಇಸವಿ 2000 ದಲ್ಲಿಯೇ ರಾಜಾಚಾರ್ ಎಂಬುವವರಿಂದ ನಿವೇಶನವನ್ನು ಖರೀದಿಸಿದ ಕ್ರಯಪತ್ರ ನನ್ನ ಬಳಿ ಇದೆ. ನಿವೇಶನಕ್ಕೆ ಹೊಂದಿಕೊಂಡಂತೆ ವ್ಯವಸಾಯ ಸೇವಾ ಸಹಕಾರ ಸಂಘದ ಗೋಡೌನ್ ಇತ್ತು. ಕಾಲಕ್ರಮೇಣ ನನ್ನ ಜಾಗವನ್ನು ಒತ್ತುವರಿ ಮಾಡಿ ಕಟಡ ನಿರ್ಮಿಸಿದ್ದಾರೆ, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಸಹಕಾರ ಸಂಘದ ವ್ಯವಸ್ಥಾಪಕ ವಿಜಯ, ಅಧ್ಯಕ್ಷ ರವಿ ಹಾಗೂ ನಿರ್ದೇಶಕ ಗಿರೀಶ್ ವಿರುದ್ಧ ದೂರು ದಾಖಿಲಿಸಲಾಗಿದೆ. ಅಧಿಕಾರಿಗಳ ಹಾಗೂ ರಾಜಕಾರಣಿಗಳ ಶ್ರೀರಕ್ಷೆಯಿಂದ ಪ್ರಬಲರಾಗಿರುವ ಇವರುಗಳ ಮೇಲೆ ಯಾವುದೇ ಕ್ರಮ ಜರುಗಿಸಲು ಹಿಂಜರಿಯಲಾಗುತ್ತಿದೆ ಎಂದು ಆರೋಪಿಸಿದರು.

ಕಟ್ಟಡ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರೆ ಗುಂಪು ಕಟ್ಟಿಕೊಂಡು ಬಂದು ಬೆದರಿಸಿ ದೌರ್ಜನ್ಯ ಎಸಗುತ್ತಲೇ ಇದ್ದಾರೆ.  ಇದರಿಂದ ನನಗೆ ಅನ್ಯಾಯವಾಗಿದೆ, ಅಲ್ಲದೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಅವರು ಸರ್ವೆ ನಡೆಸಲು ಪಿರಿಯಾಪಟ್ಟಣ ತಹಸೀಲ್ದಾರರಿಗೆ ಸೂಚನೆ ನೀಡಿದ್ದರು. ಅಧಿಕಾರಿಗಳ ಸರ್ವೆ ಕಾರ್ಯದಲ್ಲಿ ಒತ್ತುವರಿಯಾಗಿರುವುದು ಕಂಡು ಬಂದಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ರಾಜಕೀಯ ಮೇಲಾಟ ಹಾಗೂ ಅಧಿಕಾರಿಗಳ ಬೆಂಬಲದಿಂದ ನಿವೇಶನವನ್ನು ವ್ಯವಸ್ಥಿತವಾಗಿ ಕಬಳಿಸಲಾಗಿದೆ ಎಂದು ಆರೋಪಿಸಿದರು. ಸಂಬಂಧಿಸಿದ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಸೊಸೈಟಿ ಕಟ್ಟಡ ಕಾಮಗಾರಿ ನಿಲ್ಲಿಸಿ, ವಾರದೊಳಗೆ ಪ್ರಕರಣ ಇತ್ಯರ್ಥಗೊಳಿಸಬೇಕು. ಈಗ ಆಗಿರುವ ನಷ್ಟವನ್ನು ಭರಿಸಬೇಕು. ಅಲ್ಲದೇ, ಶುದ್ಧ ಕ್ರಯಪತ್ರದ ಮೂಲಕ ಖರೀದಿಸಿದ ನಿವೇಶನವನ್ನು ನನ್ನ ಸುಪರ್ದಿಗೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Leave a Reply

comments

Related Articles

error: