ಕರ್ನಾಟಕಪ್ರಮುಖ ಸುದ್ದಿ

ರಫೇಲ್ ವಿಮಾನ ಹಗರಣ : ಮಾಜಿ ಬಿಜೆಪಿ ಸಚಿವರಿಂದಲೇ ಕೇಂದ್ರದ ವಿರುದ್ಧ ಟೀಕೆ

ನವದೆಹಲಿ (ಆ.9): ಪ್ರಾನ್ಸ್‍ನಿಂದ ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಬಿಜೆಪಿಯ ಮಾಜಿ ಸಚಿವರುಗಳೇ ಈಗ ಕೇಂದ್ರ ವಿರುದ್ಧ ಟೀಕೆ ಮಾಡಿದ್ದಾರೆ.

ಈ ಸಂಬಂಧ ನಿನ್ನೆ ಪತ್ರಿಕಾಗೋಷ್ಠಿ ಮಾಡಿದ ಬಿಜೆಪಿ ಮಾಜಿ ಸಚಿವರಾದ ಯಶವಂತ ಸಿನ್ಹಾ, ಅರುಣ್ ಶೌರಿ ಮತ್ತು ಸುಪ್ರಿಂ ಕೋರ್ಟ್ ಹಿರಿಯ ವಕೀಲ ಮತ್ತು ಸ್ವರಾಜ್ ಪಕ್ಷದ ಮುಖಂಡ ಪ್ರಶಾಂತ್ ಭೂಷಣ್ ರಫೆಲ್ ಡೀಲ್, ಭಾರತೀಯ ರಕ್ಷಣಾ ಇಲಾಖೆಯ ಅತಿದೊಡ್ಡ ಹಗರಣ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ರಫೆಲ್ ವಿರುದ್ಧದ ದನಿಗೆ ಈಗ ಬಿಜೆಪಿಯ ಮಾಜಿ ಸಚಿವರುಗಳೂ ತಮ್ಮ ದನಿ ಸೇರಿಸಿದ್ದಾರೆ. ಇದರಿಂದ ಕೇಂದ್ರ ಸರ್ಕಾರದ ಕಾಲಿಗೆ ಈ ಹಗರಣದ ಬಾಹುಗಳು ಇನ್ನಷ್ಟು ಗಟ್ಟಿಯಾಗಿ ಸುತ್ತಿಕೊಳ್ಳುತ್ತಿವೆ.

ರಫೆಲ್ ಹಗರಣವು ಬೋಫೋರ್ಸ್‌ಗಿಂತಲೂ ದೊಡ್ಡ ಹಗರಣ ಎಂದ ಅರುಣ್ ಶೌರಿ, ಈ ಬಗ್ಗೆ ಕೇಂದ್ರದ ಮಹಾಲೇಖಪಾಲಕರಿಂದ ಲೆಕ್ಕಪರಿಶೋಧನೆ ಆಗಬೇಕು, ಈ ಹಗರಣದಿಂದ ಕೇಂದ್ರ ಸರ್ಕಾರವು ಭಾರತೀಯ ರಕ್ಷಣೆಯ ಜೊತೆಗೆ ರಾಜಿ ಮಾಡಿಕೊಂಡಂತಾಗಿದೆ ಎಂದು ಹೇಳಿದ್ದಾರೆ.

ವಿಮಾನದ ತಾಂತ್ರಿಕ ಅಂಶಗಳು ಮತ್ತು ಅದರ ಸಾಮರ್ಥ್ಯದ ಬಗ್ಗೆ ಮಾಹಿತಿ ಬಹಿರಂಗಪಡಿಸಬಾರದು ಎಂಬ ಅಂಶವಷ್ಟೆ ಫ್ರಾನ್ಸ್‌ ಜೊತೆಗಿನ ಒಪ್ಪಂದದಲ್ಲಿದೆ ಆದರೆ ದರ ಬಹಿರಂಗ ಪಡಿಸಬಾರದು ಎಂಬ ಒಪ್ಪಂದ ಆಗಿಯೇ ಇಲ್ಲ ಎಂದು ಅವರು ಮಾಹಿತಿ ನೀಡಿದರು.

ಫ್ರಾನ್ಸ್‌ ಸಂಸ್ಥೆ ಡಸ್ಸಾಲ್ಟ್‌ ಏವಿಯೇಷನ್ ಮತ್ತು ರಿಲಯನ್ಸ್‌ ಡಿಫೆನ್ಸ್‌ ಸೇರಿ 2016ರಲ್ಲಿ ಬಿಡುಗಡೆ ಮಾಡಿದ್ದ ಪತ್ರಿಕಾ ಪ್ರಕಟಣೆಯನ್ನು ಉಲ್ಲೇಖಿಸಿದ ಮಾಜಿ ಬಿಜೆಪಿ ಸಚಿವ ಯಶವಂತ ಸಿನ್ಹಾ ’36 ಫ್ಲೈಟ್‌ಗಳ ಬೆಲೆ 60000 ಕೋಟಿ, ಪ್ರತಿ ವಿಮಾನಕ್ಕೆ 1660 ಕೋಟಿ. ಆದರೆ ಈ ದರ ಎಂಎಂಆರ್‌ಸಿಎ ಯುದ್ಧ ವಿಮಾನಕ್ಕಿಂತಲೂ ದುಪ್ಪಟ್ಟು ಬೆಲೆಗಿಂತಲೂ ಹೆಚ್ಚು. ಅಂದರೆ ಪ್ರತಿ ರಫೆಲ್ ವಿಮಾನಕ್ಕೆ ಸುಮಾರು 1000 ಕೋಟಿಗೂ ಹೆಚ್ಚಿನ ದರ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿಯು ಈ ಹಿಂದೆ ಬೋಫೋರ್ಸ್‌ ಹಗರಣದ ಬಗ್ಗೆ ದನಿ ಎತ್ತಿದ ರೀತಿಯಲ್ಲೇ ವಿರೋಧ ಪಕ್ಷಗಳು ಈಗ ರಫೆಲ್ ವಿರುದ್ಧ ದನಿ ಎತ್ತಬೇಕಾಗಿದೆ. ರಫೆಲ್‌ಗೆ ಹೋಲಿಸಿದರೆ ಬೊಫೋರ್ಸ್‌ ಹಗರಣ ತೀರಾ ಸಾಮಾನ್ಯ. ರಫೆಲ್ ಅಷ್ಟು ದೊಡ್ಡ ಮಟ್ಟದ ಹಗರಣ ಎಂದು ಅವರು ಸುಪ್ರಿಂ ಕೋರ್ಟ್‌ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಎಚ್‌ಎಎಲ್‌ಗೆ ಸಿಗಬೇಕಿದ್ದ ವಿಮಾನ ತಯಾರಿ ಮತ್ತು ಮೇಲುಸ್ತುವಾರಿ ಒಪ್ಪಂದವನ್ನು ಹೊಸ ಒಪ್ಪಂದ ಆಗುವ ಕೆಲವು ದಿನಗಳ ಮೊದಲು ಅಂದರೆ 2016ರ ಅಂತ್ಯದಲ್ಲಿ ಕೇವಲ ಕೆಲವೇ ತಿಂಗಳುಗಳ ಮುಂಚೆ ಹುಟ್ಟಿದ ಸಂಸ್ಥೆಗೆ ನೀಡಲಾಗಿದೆ, ಇದರ ಹಿಂದೆ ದುರುದ್ದೇಶ ಇದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಭಾರತೀಯ ವಾಯು ಸೇನೆಗೆ 126 ರಫೆಲ್‌ ವಿಮಾನಗಳು ಬೇಕಾಗಿವೆ. 2022ರ ವೇಳೆಗೆ 36 ವಿಮಾನಗಳು ದೊರಕಲಿವೆ, ಅದೂ ಪ್ರತಿ ವಿಮಾನಕ್ಕೆ ದುಪ್ಪಟ್ಟಿಗಿಂತಲೂ ಹೆಚ್ಚಿನ ಬೆಲೆ ತೆತ್ತು. ಹಾಗಿದ್ದರೆ ಇದು ಭಾರತೀಯ ರಕ್ಷಣಾ ವ್ಯವಸ್ಥೆಯೊಂದಿಗೆ ಮಾಡಿಕೊಂಡ ರಾಜಿ ಅಲ್ಲದೆ ಇನ್ನೇನು ಎಂದು ಪತ್ರಿಕಾಗೋಷ್ಠಿ ನಡೆಸಿದ ಮೂವರೂ ಪ್ರಶ್ನೆ ಮಾಡಿದ್ದಾರೆ. (ಎನ್.ಬಿ)

Leave a Reply

comments

Related Articles

error: