ಮೈಸೂರು

ವಿನೋಬಾ ರಸ್ತೆ ಸಂಚಾರ ಮುಕ್ತಗೊಳಿಸಲು ಆದೇಶ

ಮೈಸೂರು ಮಹಾನಗರಪಾಲಿಕೆ ಮತ್ತು ಮೇವರಿಕ್ ಹೋಲ್ಡಿಂಗ್ ಸಂಸ್ಥೆಯವರು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅಕ್ರಮವಾಗಿ ವಿನೋಬಾ ರಸ್ತೆಗೆ ತಂತಿಬೇಲಿ ಹಾಕಿ ಮುಚ್ಚಿದ್ದನ್ನು ತೆರವುಗೊಳಿಸಿ ಸಂಚಾರ ಮುಕ್ತಗೊಳಿಸುವಂತೆ ನ್ಯಾಯಾಲಯವು ಆದೇಶ ನೀಡಿದೆ.

ಒಂದು ವಾಣಿಜ್ಯ ಸಂಕೀರ್ಣವನ್ನು ಮೈಸೂರಿನ ಹೃದಯ ಭಾಗದಲ್ಲಿರುವ ಮಕ್ಕಾಜಿ ಚೌಕದಲ್ಲಿ ನಿರ್ಮಿಸುವ ಸಲುವಾಗಿ ಮಹಾನಗರಪಾಲಿಕೆಯು ಮೇವರಿಕ್ ಹೋಲ್ಡಿಂಗ್ಸ್ ಮತ್ತು ಇನ್ವೆಸ್ಟ್ ಮೆಂಟ್ ಸಂಸ್ಥೆಯೊಂದಿಗೆ 2006ರ ಮೇ 25ರಂದು ಒಪ್ಪಂದ ಮಾಡಿಕೊಂಡಿತ್ತು.

ಕರ್ನಾಟಕ ಮುನಿಸಿಪಲ್ ಕಾರ್ಪೊರೇಶನ್ ಕಾಯಿದೆಯನ್ವಯ ರಾಜ್ಯ ಸರ್ಕಾರದ ಅನುಮತಿಯಿಲ್ಲದೇ ಯಾವುದೇ ರಸ್ತೆಯನ್ನು ಶಾಶ್ವತವಾಗಿ ಮುಚ್ಚುವಂತಿಲ್ಲ. ನಗರ ಪಾಲಿಕೆ ಮಾಡುತ್ತಿರುವ ಕಾನೂನು ಬಾಹಿರ ಕೃತ್ಯವನ್ನು ತಡೆಯಲೋಸುಗ ಕೆಲವರು ಮೈಸೂರಿನ ನಾಲ್ಕನೇ ಹೆಚ್ಚುವರಿ ಪ್ರಥಮ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ದಾಖಲಿಸಿದ್ದರು. ವಿನೋಬಾ ರಸ್ತೆಯನ್ನೂ ಸೇರಿಸಿಕೊಂಡು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಪಾಲಿಕೆಯು ಮೇವರಿಕ್ ಸಂಸ್ಥೆಯೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಅಸಿಂಧು ಎಂದು ಘೋಷಿಸಿದ ನ್ಯಾಯಾಲಯ ಒಪ್ಪಂದದ ಆ ಭಾಗವನ್ನೇ ರದ್ದು ಮಾಡಿ ಆದೇಶಿಸಿತ್ತು. ವಿನೋಬಾ ಮೇವರಿಕ್ ಸಂಸ್ಥೆಗೆ ನೀಡಿದ ಅನುಮತಿಯನ್ನು ಹಿಂಪಡೆಯುವಂತೆ ಪಾಲಿಕೆಗೆ ನಿರ್ದೇಶನ ನೀಡಿ ನ್ಯಾಯಾಲಯವು ತೀರ್ಪು ನೀಡಿತ್ತು.

ಆದರೆ ಕಾನೂನು ಬಾಹಿರವಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದಲ್ಲದೇ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ವಿನೋಬಾ ರಸ್ತೆಯನ್ನು ತಂತಿಬೇಲಿ ನಿರ್ಮಿಸಿ ಮುಚ್ಚಿ ಹಾಕಿತ್ತು. ಇದನ್ನು ಪ್ರಶ್ನಿಸಿ ಕೆಲವರು ಜೆಎಂಎಫ್ ಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಚ್.ಆರ್.ರಮ್ಯಾ ವಿನೋಬಾ ರಸ್ತೆಗೆ ಹಾಕಿರುವ ತಂತಿಬೇಲಿಯನ್ನು ಒಂದು ತಿಂಗಳೊಳಗೆ ತೆರವುಗೊಳಿಸುವಂತೆ ಮೈಸೂರು ನಗರಪಾಲಿಕೆಗೆ ನಿರ್ದೇಶನ ನೀಡಿದ್ದಾರೆ.

Leave a Reply

comments

Related Articles

error: