ಮೈಸೂರು

ಅನಗತ್ಯ ವೆಚ್ಚದ ಬದಲು ಕನ್ನಡ ಪತ್ರಿಕೆ ಕೊಂಡು ಓದಿ : ರಾಜಶೇಖರ ಕೋಟಿ ಸಲಹೆ

ಕನ್ನಡ ಪತ್ರಿಕೆಗಳನ್ನು ಓದುವುದರಿಂದ ಕನ್ನಡದ ಮೌಲ್ಯ ಹೆಚ್ಚಲಿದೆ ಎಂದು ಪತ್ರಿಕೋದ್ಯಮಿ ರಾಜಶೇಖರ ಕೋಟಿ ಅಭಿಪ್ರಾಯಪಟ್ಟರು.

ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ಟೆರೆಷಿಯನ್ ಕಾಲೇಜು ವೃತ್ತದಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿ ಹಾಗೂ ಕನ್ನಡ ಸಾಹಿತ್ಯ ಕಲಾಕೂಟದ ಸಹಯೋಗದಲ್ಲಿ ನಡೆದ ಕನ್ನಡ ಪತ್ರಿಕೆ ಕೊಂಡು ಓದಿ ಅಭಿಯಾನವನ್ನು ಕನ್ನಡ ಪತ್ರಿಕೆ ನೀಡುವ ಮೂಲಕ ರಾಜಶೇಖರ ಕೋಟಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಕನ್ನಡ ಪತ್ರಿಕೆಯನ್ನು ಓದುವುದರಿಂದ ನಿಮ್ಮ ಘನತೆಗೆ ಕುಂದು ಬರಲಿದೆ ಅಂದುಕೊಳ್ಳಬೇಡಿ. ಕನ್ನಡ ಪತ್ರಿಕೆಯನ್ನು ಓದುವುದರಿಂದ ನಿಮ್ಮ ಘನತೆ ಹೆಚ್ಚಲಿದೆ. ವಿಶ್ವದ ಪ್ರಭಾವಿ ಐದು ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡದ ಲಿಪಿ ಇನ್ನೂ ಜೀವಂತವಾಗಿದೆ. ಕನ್ನಡ ಶ್ರೀಮಂತ ಭಾಷೆ. ನಾವಾಡುವ ಭಾಷೆ ತುಂಬಾ ಮುದ್ದಾದ ಭಾಷೆ ಎಂದು ಹೇಳಿಕೊಳ್ಳೋದಕ್ಕೆ ತುಂಬಾ ಹೆಮ್ಮೆಯಾಗುತ್ತದೆ ಎಂದು ತಿಳಿಸಿದರು.

ಬಹುತೇಕ ಎಲ್ಲ ಕನ್ನಡ ಪತ್ರಿಕೆಗಳು ಇಂದು ನಷ್ಟದಲ್ಲಿವೆ. ಮುದ್ರಣವಾಗಲು ನಾಲ್ಕರಿಂದ ಐದು ರೂಪಾಯಿ ತಗುಲಿದೆ ನಾವದನ್ನು 2ರಿಂದ 2.50ರೂಗಳಿಗೆ ಮಾರಾಟ ಮಾಡುತ್ತೇವೆ. ಅನಗತ್ಯವಾಗಿ ಹಣವನ್ನು ವೆಚ್ಚ ಮಾಡುವ ಬದಲು ಕನ್ನಡ ಪತ್ರಿಕೆಗಳನ್ನು ಕೊಂಡು ಓದಿ. ಪತ್ರಿಕೆಗಳನ್ನು ಓದುವುದರಿಂದ ನಿಮ್ಮ ಸುತ್ತಮುತ್ತಲಿನ ಹಲವು ವಿಷಯಗಳು ತಿಳಿಯುತ್ತವೆ. ಜೊತೆಗೆ ಜ್ಞಾನಾಭಿವೃದ್ಧಿಯಾಗಲಿದೆ. ಸ್ಥಳೀಯ ಪತ್ರಿಕೆಗಳಷ್ಟೇ ಅಲ್ಲ, ರಾಜ್ಯಮಟ್ಟದ ಪತ್ರಿಕೆಗಳನ್ನೂ ಕೊಂಡು ಓದಿ. ಕನ್ನಡ ಪತ್ರಿಕೆಗಳನ್ನು ಅಭಿವೃದ್ಧಿಪಡಿಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕವಯಿತ್ರಿ ಡಾ.ಲತಾ ರಾಜಶೇಖರ್, ಜಿಲ್ಲಾಪಂಚಾಯತ್ ಸದಸ್ಯ ಮಾದೇಗೌಡ, ಪಾಲಿಕೆ ಸದಸ್ಯೆ ಮಹದೇವಮ್ಮ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಕನ್ನಡ ಚಳವಳಿ ಕೇಂದ್ರ ಸಮಿತಿಯ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ಉಪಸ್ಥಿತರಿದ್ದರು.

Leave a Reply

comments

Related Articles

error: