ಕರ್ನಾಟಕ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಪ್ರತಿಭಟನೆ

ರಾಜ್ಯ(ಮಡಿಕೇರಿ )ಆ.9 : – ಕಾರ್ಮಿಕ ವರ್ಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸರಕಾರಗಳು ಕಳೆದ ಮೂರು ದಶಕಗಳಲ್ಲಿ ರೂಪಿಸಿದ ನವ ಉದಾರೀಕರಣ ನೀತಿಗಳು ದೇಶದ ಬಹುಸಂಖ್ಯಾತ ಕಾರ್ಮಿಕರ ಮತ್ತು ಇತರ ದುಡಿಯುವ ಜನರ ಉತ್ತಮ ಬದುಕನ್ನು ಹಾಳು ಮಾಡಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೇಂದ್ರ ಸರಕಾರದ ಅಚ್ಛೇ ದಿನಗಳು ದೇಶದ ಶೇ.0.1ರಷ್ಟು ಜನರಿಗೆ ಎಂದರೆ ಬಂಡವಾಳಶಾಹಿಗಳು ಹಾಗೂ ಶ್ರೀಮಂತರಿಗೆ ಮಾತ್ರ ಅನ್ವಯವಾಗಿದ್ದು, ಬಹುಸಂಖ್ಯಾತ ಶೇ.99.9ರಷ್ಟು ಜನರಿಗೆ ಕಷ್ಟದ ದಿನಗಳಾಗಿವೆ ಎಂದು ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಎ.ಮಹದೇವ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ನಾಲ್ಕು ವರ್ಷಗಳಲ್ಲಿ ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು, ನಿರುದ್ಯೋಗ, ಬಡವ-ಮತ್ತು ಶ್ರೀಮಂತರ ನಡುವಿನ ಕಂದಕವನ್ನು ಮತ್ತಷ್ಟು ಹೆಚ್ಚಿಸಿದ್ದು, ಅಸಮಾನತೆ ಅತಿ ವೇಗವಾಗಿ ಬೆಳೆಯುತ್ತಿದೆ. ಉತ್ಪಾದನೆಯ ಹೆಚ್ಚುವರಿ ಸಂಪತ್ತಿನ ಶೇ.73ರಷ್ಟು ಜನಸಂಖ್ಯೆಯ ಮೇಲ್ಸ್ತರದ ಶೇ.1ರಷ್ಟು ಮಂದಿ ಬಾಚಿಕೊಂಡಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಕಾರ್ಪೋರೇಟ್ ಬಂಡವಾಳದಾರರ ಸಾಲಗಳಲ್ಲಿ ಸುಮಾರು 2.5 ಲಕ್ಷ ಕೋಟಿ ಸಾಲವನ್ನು ಕಟ್ಟಲಾರದ ಸಾಲವೆಂದು ಕೇಂದ್ರ ಸರಕಾರ ಲೆಕ್ಕದಿಂದ ತೆಗೆದುಹಾಕಿದೆ ಎಂದು ದೂರಿದರು.

ಸಂಘಟನೆಯ ಜಂಟಿ ಕಾರ್ಯದರ್ಶಿ ಪಿ.ಆರ್.ಭರತ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ, ದುಡಿಯುವ ವರ್ಗದ ಜನತೆಗೆ ನೈಜ ಸ್ವಾತಂತ್ರ್ಯ ಇನ್ನೂ ಲಭಿಸಿಲ್ಲ ಎಂದು ಟೀಕಿಸಿದರಲ್ಲದೆ, ದುಡಿಯುವ ಜನರ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿ ಆ.14ರ ಸಂಜೆ 6ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ನಗರದ ಗಾಂಧಿ ಮೈದಾನದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಹೆಚ್.ಬಿ.ರಮೇಶ್ ಮಾತನಾಡಿ, ಸೆ.5 ರಂದು ನಡೆಯುವ ದೆಹಲಿ ಚಲೋ ಕಾರ್ಯಕ್ರಮಕ್ಕೆ ಕೊಡಗಿನಿಂದ ಸುಮಾರು 500 ಮಂದಿ ಕಾರ್ಮಿಕರು ತೆರಳಲಿರುವುದಾಗಿ ಹೇಳಿದರು.

ಉಪಾಧ್ಯಕ್ಷ ಎನ್.ಡಿ.ಕುಟ್ಟಪ್ಪ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: